ತಿರುವನಂತಪುರ: ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಕುರಿತು ನಟ ಮಮ್ಮುಟ್ಟಿ ಮೌನ ಮುರಿದಿದ್ದಾರೆ. ಚಿತ್ರರಂಗದಲ್ಲಿ ಯಾವುದೇ ಪವರ್ ಗ್ರೂಪ್ಗಳು ಇಲ್ಲ ಎಂದು ಮಮ್ಮುಟ್ಟಿ ಹೇಳಿದ್ದಾರೆ. ಹೇಮಾ ಸಮಿತಿ ವರದಿಯಲ್ಲಿ ಸೂಚಿಸಲಾದ ಶಿಫಾರಸುಗಳನ್ನು ಸ್ವಾಗತಿಸಿದ್ದಾರೆ. ಚಿತ್ರೋದ್ಯಮದ ಬಗ್ಗೆ
ಅಧ್ಯಯನ ಮಾಡಲು, ವರದಿಯನ್ನು ಸಿದ್ಧಪಡಿಸಲು ಹಾಗೂ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ಸರ್ಕಾರ ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ರಚಿಸಿತ್ತು. ಅದರಂತೆ ಹೇಮಾ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಪರಿಹಾರ ಕ್ರಮಗಳನ್ನು ಎಲ್ಲರೂ ಸರ್ವಾನುಮತದಿಂದ ಸ್ವಾಗತಿಸಬೇಕು. ಜತೆಗೆ, ಶಿಫಾರಸುಗಳನ್ನು ಕಾರ್ಯಗತಗೊಳಿಸಲು ಚಲನಚಿತ್ರೋದ್ಯಮದ ಎಲ್ಲಾ ಸಂಘಗಳು ಒಟ್ಟಾಗಿ ನಿಲ್ಲುವ ಸಮಯ ಬಂದಿದೆ’ ಎಂದು ಮಮ್ಮುಟ್ಟಿ ‘ಫೇಸ್ಬುಕ್’ನಲ್ಲಿ ಪೋಸ್ಟ್ ಮಾಡಿದ್ದಾರೆ.ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇಂತಹ ಬೆಳವಣಿಗೆಗಳು ನಡೆದಾಗ ಕಲಾವಿದರ ಸಂಘದ ನಾಯಕತ್ವ ವಹಿಸಿಕೊಂಡಿರುವವರು ಮೊದಲು ಪ್ರತಿಕ್ರಿಯಿಸುತ್ತಾರೆ ಎಂಬ ಕಾರಣಕ್ಕೆ ಮೌನ ವಹಿಸಿದ್ದೆ ಎಂದು ಮಮ್ಮುಟ್ಟಿ ಹೇಳಿದ್ದಾರೆ.
ಹೇಮಾ ಸಮಿತಿ ವರದಿ ಬಳಿಕ ಕೆಲವು ಮಂದಿ ಸಿನಿಮಾ ನಟರು, ನಿರ್ದೇಶಜರ ವಿರುದ್ಧ ದೌರ್ಜನ್ಯ ಅರೋಪಗಳು ಕೇಳಿಬಂದಿದ್ದು, ಮಲಯಾಳ ಚಿತ್ರೋದ್ಯಮದಲ್ಲಿ ಅಲ್ಲೋಲ–ಕಲ್ಲೋಲ ಉಂಟಾಗಿದೆ. ಈ ಬಗ್ಗೆ ಮೋಹನ್ಲಾಲ್ ಪ್ರತಿಕ್ರಿಯೆ ಬೆನ್ನಲ್ಲೇ ಮಮ್ಮುಟ್ಟಿ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.