ತಿರುವನಂತಪುರ: ಕೇರಳದಲ್ಲಿ ಮಲಯಾಳಂ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸುವ ರಾಜ್ಯ ಸರಕಾರದ ಭಾಷಾ ಮಸೂದೆಗೆ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅಂಕಿತ ಹಾಕಿದ್ದಾರೆ. ಕೇರಳವನ್ನು ಕೇರಳಂ ಎಂದು ಪರಿಷ್ಕರಿಸಿ ನಾಮಕರಣಗೊಳಿಸಿದ ಹಿನ್ನೆಲೆಯಲ್ಲಿ ಇದೀಗ ಮಲಯಾಳಂ ಭಾಷೆಯನ್ನು
ರಾಜ್ಯದ ಔದ್ಯೋಗಿಕ ಭಾಷೆಯನ್ನಾಗಿ ಘೋಷಿಸಲಾಗಿದೆ.ಕೇರಳ ಔದ್ಯೋಗಿಕ ಭಾಷಾ ಕಾಯ್ದೆ 1969ನ್ನು ಅನುಸರಿಸಿಕೊಂಡು ಕೇರಳದಲ್ಲಿ ಈ ವರೆಗೆ ಇಂಗ್ಲೀಷ್ ಮತ್ತು ಮಲಯಾಳ ರಾಜ್ಯದ ಔದ್ಯೋಗಿಕ ಭಾಷೆಯಾಗಿತ್ತು. ಇದರ ಬದಲಿಗೆ ಇದೀಗ ಮಲಯಾಳಂ ಮಾತ್ರವೇ ಕೇರಳದ ಔದ್ಯೋಗಿಕ ಭಾಷೆ ಯನ್ನಾಗಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಇದರನ್ವಯ ಒಂದರಿಂದ ಹತ್ತನೇ ತರಗತಿ ತನಕ ಕೇರಳದಲ್ಲಿ ಮಲಯಾಳಂ ಪ್ರಾಥಮಿಕ ಶಿಕ್ಷಣಕ್ಕೆ ಮಲಯಾಳಂ ಕಡ್ಡಾಯವಾಗಲಿದೆ.
ಆಲ್ಲದೇ ವಿ. ವಿ. ಪಠ್ಯಗಳಲ್ಲೂ ಮಲಯಾಳಂ ಕಡ್ಡಾಯವಾಗಲಿದೆ. ಸರಕಾರಿ ಸುತ್ತೋಲೆ ಸಹಿತ ಸರಕಾರೀ ವ್ಯವಹಾರಗಳೆಲ್ಲವೂ ಮಲಯಾಳಂಗೆ ಸೀಮಿತವಾಗಲಿದೆ. ಜತೆಗೆ ಪಿಎಸ್ ಸಿ ಪರೀಕ್ಷೆಗಳೂ ಮಲಯಾಳಂ ಗೆ ಬದಲಾಗಲಿವೆ.ಈ ಹಿಂದೆ ಯುಡಿಎಫ್ ಆಡಳಿತಾವಧಿಯಲ್ಲೂ ಸರಕಾರ ಮಲಯಾಳಂ ಭಾಷಾ ಮಸೂದೆ ಮಂಡಿಸಿತ್ತು. ಆದರೆ ಅಂದು ರಾಜ್ಯಪಾಲರು ಆದನ್ನು ರಾಷ್ಟ್ರಪತಿ ಅಂಕಿತಕ್ಕಾಗಿ ಕಳಿಸಿದ್ದರೂ, ಅಂಕಿತ ಸಹಿತ ಅನುಮತಿ ದೊರೆತಿರಲಿಲ್ಲ. ಬಳಿಕ ರಾಜಕೀಯ ಬೇಧ ರಹಿತ ಕೇರಳದ ಸಾಂಸ್ಕೃತಿಕ ವಲಯ ಈ ಬೇಡಿಕೆ ಮುಂದಿಟ್ಟಿತು. ಇದರಂತೆ ಪಿಣರಾಯಿ ವಿಜಯನ್ ಸರಕಾರ ಈ ಹಿಂದಿನ ಮಸೂದೆಯನ್ನು ಪರಿಷ್ಕರಿಸಿ ಅಕ್ಟೋಬರ್ ತಿಂಗಳ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಯನ್ನು ಮಂಜೂರು ಮಾಡಿತ್ತು.







