ಸುಳ್ಯ:ನಿನ್ನೆ ವಿಜಯದಶಮಿಯಂದು ಶ್ರೀದೇವಿಯ ಮುಂದೆ ಪುಟಾಣಿಗಳಿಗೆ ಅ.ಆ.ಇ.ಈ ಅಕ್ಷರಾಭ್ಯಾಸದ ಸಂಭ್ರಮವಾದರೆ ಇಂದು ಮುಗ್ದ ಕಂಠದಿಂದ ಹೊರ ಹೊಮ್ಮುವ ಮಧುರ ಹಾಡುಗಳ, ನೃತ್ಯೋಲ್ಲಾಸದ ಕಲರವ, ಆಕರ್ಷಕ ಚಿತ್ರ ರಚನೆ, ಛದ್ಮವೆಷ.. ಹೀಗೆ ಶುಕ್ರವಾರ ಸುಳ್ಯ ದಸರಾದ ಶ್ರೀ ಶಾರದಾಂಬಾ ವೇದಿಕೆ ಪೂರ್ತಿ ಮಕ್ಕಳದ್ದೇ ಕಲರವ, ಸಂಭ್ರಮ. ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ
ನಡೆಯುತ್ತಿರುವ 54ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ದಲ್ಲಿ ಇಂದು ಮಕ್ಕಳ ದಸರಾ ಸಂಭ್ರಮ. ಹಲವು ವಿಶೇಷತೆಗಳೊಂದಿಗೆ ಪ್ರತಿ ವರ್ಷ ಸುಳ್ಯ ದಸರಾ ಆಯೋಜಿಸಲಾಗುತ್ತಿದ್ದು ದಿನ ಪೂರ್ತಿ ಮಕ್ಕಳಿಗಾಗಿಯೇ ಮಕ್ಕಳ ದಸರಾ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಒಂಭತ್ತು ದಿನಗಳ ದಸರಾ ಉತ್ಸವದಲ್ಲಿ

ಮೊನ್ನೆ ಮಹಿಳಾ ದಸರಾ, ನಿನ್ನೆ ವಿಜಯದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸ ಇಂದು ಮಕ್ಕಳ ಪ್ರತಿಭೆ ಒರಗೆ ಹಚ್ಚುವ ಮಕ್ಕಳ ದಸರಾ ಕಾರ್ಯಕ್ರಮ. ತಾಲೂಕಿನಾದ್ಯಂತ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳಿಂದಲೇ ಮಕ್ಕಳ ದಸರಾ ಉದ್ಘಾಟನೆಗೊಂಡಿತು.
ಬಳಿಕ ವಿವಿಧ ಸ್ಪರ್ಧೆಗಳು ನಡೆಯಿತು.ಮಕ್ಕಳಿಗಾಗಿ ಛದ್ಮವೇಷ, ಭಾವಗೀತೆ, ಭಕ್ತಿಗೀತೆ, ಸಮೂಹ ಜನಪದ ಗೀತೆ, ಭರತ ನಾಟ್ಯ, ಸಮೂಹ ಜನಪದ ನೃತ್ಯ, ಚಿತ್ರ ಕಲಾ ಸ್ಪರ್ಧೆ, ರಸ ಪ್ರಶ್ನೆ, ವಿಜ್ಞಾನ ಮಾದರಿ, ಫನ್ ಗೇಮ್ಗಳು, ಮನರಂಜನೆಗಳು, ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಾಲೂಕಿನಾದ್ಯಂತ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಮಕ್ಕಳ ದಸರಾ ಉದ್ಘಾಟನೆ:
ಮಕ್ಕಳ ದಸರಾ ಕಾರ್ಯಕ್ರಮವನ್ನು ಸ್ವರಾ ಎನ್.ಎಲ್.,ಆದಿತ್ಯ ಪಿ ಪ್ರಮೋದ್, ದೈವಿಕ್ ಪಿ. ಪ್ರಮೋದ್ ದೀಪ ಬೆಳಗಿ ಉದ್ಘಾಟಿಸಿದರು.
ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಲೀಲಾಧರ್ ಡಿ.ವಿ., ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಮಹಿಳಾ ಸಮಿತಿ ಅಧ್ಯಕ್ಷೆ ಲತಾ ಮಧುಸೂದನ್, ಮಕ್ಕಳ ದಸರಾ ಸಂಯೋಜಕ ಲೋಕೇಶ್ ಊರುಬೈಲು,ಕೃಷ್ಣ ಬೆಟ್ಟ, ಬಾಲಕೃಷ್ಣ ಎಸ್.ಬಿ. ಲ್ಯಾಬ್,ಪ್ರಭಾಕರನ್ ನಾಯರ್, ಶಶಿಕಲಾ ಪ್ರಭಾಕರನ್, ಜಯಕೃಷ್ಣ, ಸುನಂದ ಶೆಟ್ಟಿ ವೇದಿಕೆಯಲ್ಲಿ ಇದ್ದರು.














