ವೇಣೂರು: ಜೈನ ಧರ್ಮ ಧರ್ಮಪ್ರಭಾವನೆಯೊಂದಿಗೆ ಆರೋಗ್ಯಪೂರ್ಣ ಜೀವನಕ್ಕೆ ನಿರಂತರ ಪ್ರೇರಣೆ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಶುಕ್ರವಾರ ವೇಣೂರಿನಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು
ಸಾಧಿಸಿದ ಭಾರತದಲ್ಲಿ ಜೈನರ ಜೀವನಶೈಲಿ,ವ್ರತ-ನಿಯಮಗಳು, ನಾಯಕತ್ವ ಗುಣ, ಪರೋಪಕಾರ ಸೇವಾಕಳಕಳಿ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ.
ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ ಅತ್ಯಂತ ವೈಭವದಿಂದ ಮತ್ತು ವ್ಯವಸ್ಥಿತವಾಗಿ ನಡೆದ ಬಗ್ಗೆ ಸಚಿವರು ಮುಕ್ತಪ್ರಶಂಸೆ ವ್ಯಕ್ತಪಡಿಸಿದರು.

ಪೂಜ್ಯ ಅಮೋಘ್ ಕೀರ್ತಿ ಮುನಿಮಹಾರಾಜರು ಮಂಗಲಪ್ರವಚನ ನೀಡಿ ಮಸ್ತಕಾಭಿಷೇಕದಿಂದ ಎಲ್ಲರಲ್ಲೂ ಅರಿಷಡ್ವರ್ಗಗಳು ದೂರವಾಗಿ ಮನಸು ಪವಿತ್ರವಾಗಿದೆ.ನವಚೈತನ್ಯ ಮೂಡಿ ಬಂದಿದೆ ಎಂದು ಹೇಳಿದರು. ಪೂಜ್ಯ ಅಮರಕೀರ್ತಿ ಮುನಿಮಹಾರಾಜರು ಆಶೀರ್ವಚನ ನೀಡಿ ಜೈನ ಧರ್ಮದ ಪ್ರಕಾರ ಪರಿಶುದ್ಧ ಭಕ್ತಿಯಿಂದ ಮುಕ್ತಿ ಪ್ರಾಪ್ತಿಯಾಗುತ್ತದೆ.ಬಾಹುಬಲಿಯ ಜೀವನ ಮತ್ತು ಸಂದೇಶ ಆದರ್ಶ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಎಲ್ಲರೂ ಭಾವನೆಯಿಂದ ಬಾಹುಬಲಿ ಆಗಬೇಕು. ಮಸ್ತಕಾಭಿಷೇಕದ ಸವಿ ನೆನಪನ್ನು ಸದಾ ಸ್ಮರಿಸಿಕೊಂಡು ಸಾರ್ಥಕ ಹಾಗೂ ಪವಿತ್ರ ಜೀವನ ನಡೆಸಬೇಕು.ಜೈನರ ಆದರ್ಶ ಜೀವನಶೈಲಿ ಮತ್ತು ನಾಯಕತ್ವ ಗುಣದಿಂದಾಗಿ ಸಮಾಜದಲ್ಲಿ ಅವರಿಗೆ ವಿಶೇಷ ಗೌರವ ಇದೆ ಎಂದರು.

ಮೂಡಬಿದ್ರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮಾತನಾಡಿದರು.
ಸಚಿವ ಡಿ.ಸುಧಾಕರ್ ಪದ್ಮಪ್ರಸಾದ ಅಜಿಲ ಅವರನ್ನು ಗೌರವಿಸಲಾಯಿತು
ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧಕ್ಶ ಡಾ. ಪದ್ಮಪ್ರಸಾದ ಅಜಿಲ ಸ್ವಾಗತಿಸಿದರು, ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ ಧನ್ಯವಾದವಿತ್ತರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.

ಮಹಾಮಸ್ತಕಾಭಿಷೇಕ ಸಂಪನ್ನ:
ಮಾ.22ರಿಂದ ಆರಂಭಗೊಂಡ ಮಹಾಮಸ್ತಕಾಭಿಷೇಕ ಮಾ.1ರಂದು ಸಂಪನ್ನಗೊಂಡಿತು. ಕೊನೆಯದಿನ 1008 ಕಲಶಗಳಿಂದ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನೆರವೇರಿತು. ಆರಂಭದ 4 ದಿನ 108 ಕಲಶಗಳಿಂದ ಬಳಿಕದ 3 ದಿನ 216 ಕಲಶಗಳಿಂದ 8ನೇ ದಿನ 514 ಕಲಶಗಳಿಂದ ಹಾಗೂ ಕೊನೆಯ ದಿನ 1008 ಕಲಶಗಳಿಂದ ಮಸ್ತಕಾಭಿಷೇಕ ನಡೆಯಿತು.







