ಸುಳ್ಯ:ಸುಳ್ಯ ನಗರದಲ್ಲಿ ಮಹಾಯೋಜನೆಯನ್ನು ಅನುಷ್ಠಾನಗೊಳಿಸುವ ಅಂಗವಾಗಿ ಚರ್ಚಿಸಲು ಹಾಗೂ ಸಮಾಲೋಚನಾ ಸಭೆ ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆಯಿತು. ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ, ಮಹಾಯೋಜನೆಯನ್ನು ನಗರದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಭೆಯನ್ನು ನಡೆಸಲಾಗಿದೆ. ಯೋಜನೆಯಲ್ಲಿ ಪ್ರತೀ ವಾರ್ಡ್ನಲ್ಲಿ ಕೆಲವೊಂದು ವಿಚಾರಗಳಲ್ಲಿ
ಬದಲಾವಣೆಯ ಅಗತ್ಯವಿರುವ ನಿಟ್ಟಿನಲ್ಲಿ ಸಂಬಂಧಿಸಿದವರ ಸಭೆಯನ್ನು ನಡೆಸಲಾಗಿದೆ. ಮುಂದಿನ ಹಂತವಾಗಿ ಪ್ರಾಯೋಗಿಕವಾಗಿ ಸ್ಥಳ ಪರಿಶೀಲನೆ ಅಂಗವಾಗಿ ಮುಂದಿನ ಮಂಗಳವಾರ ನಗರದ 7ನೇ ವಾರ್ಡ್ ವ್ಯಾಪ್ತಿಯಲ್ಲಿ ಭೇಟಿ ಮಾಡುವ ಬಗ್ಗೆ ತಿಳಿಸಿದರು. ಅಂದಿನ ದಿನ ಮಧ್ಯಾಹ್ನ 2.30ಕ್ಕೆ ಸ್ಥಳ ಭೇಟಿ ನಡೆಯಲಿದ್ದು, ವಲಯ ಮತ್ತು ರಸ್ತೆಗಳಿಗೆ ಸಂಬಂಧಿಸಿದಂತೆ ಬದಲಾವಣೆಯ ಪೂರಕ ಮಾಹಿತಿ ಪಡೆಯಬಹುದು ಎಂದರು. ಈಗಾಗಲೇ ನಕ್ಷೆ ಸಿದ್ಧಗೊಂಡಿದ್ದು, ಅದರಲ್ಲಿ ಕಂಡುಬರುವ ಬದಲಾವಣೆಗೆ ಮಾಹಿತಿ ಪಡೆಯಲು ಪ್ರಾಯೋಗಿಕ ಕೆಲಸ ಆರಂಭಗೊಳ್ಳಲಿದೆ. ಬಳಿಕ ಪ್ರತೀ ವಾರ್ಡ್ಗಳಲ್ಲಿ ಭೇಟಿ ನೀಡಿ ಫೀಲ್ಡ್ ವರ್ಕ್ ಮಾಡಬೇಕಿದೆ ಎಂದರು.
ಮಹಾಯೋಜನೆಯಲ್ಲಿ ಸೂಚಿಸಿದಂತೆ ವಲಯಗಳನ್ನು ನಕ್ಷೆಯಲ್ಲಿ ತಿಳಿಸಲಾಗಿದೆ. ವಲಯ ಮತ್ತು ರಸ್ತೆಗಳಿಗೆ ಆದ್ಯತೆ ನೀಡಬೇಕಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ನಾವು ನಿರ್ಧರಿಸುವ ನಿಗಧಿತ ರಸ್ತೆ ಅಗಲ ಇಲ್ಲದ ಕಡೆಗಳಲ್ಲಿ ಆ ಭಾಗದ ಜನರ ಮನವೊಲಿಸುವ ಯತ್ನ ಮಾಡಬೇಕಾಗುತ್ತದೆ ಎಂದು ಸಭೆಯಲ್ಲಿ ಸಲಹೆ ವ್ಯಕ್ತವಾಯಿತು.
ಎಲ್ಬಿಡಿ ಇಂಜಿನಿಯರ್ಗಳಾದ ಎಂ.ಎಸ್.ಪ್ರಸಾದ್, ವಿಜಯ್ ಸುಳ್ಯ, ಗುರುರಾಜ್, ಶ್ಯಾಂಪ್ರಸಾದ್, ಕೆ.ಕೃಷ್ಣರಾವ್, ಚಂದ್ರಶೇಖರ, ನಗರ ಪಂಚಾಯತ್ ಸದಸ್ಯರಾದ ಸುಧಾಕರ್, ಬುದ್ಧನಾಯ್ಕ್, ಬಾಲಕೃಷ್ಣ ರೈ, ಪ್ರವಿತಾ, ಸುಶೀಲಾ, ಶಶಿಕಲಾ, ಶೀಲಾ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ನ.ಪಂ. ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.