ಸುಳ್ಯ:ಕೊಲ್ಲಮೊಗ್ರದಲ್ಲಿ ಆಭಗೊಂಡಿರುವ ಮದ್ಯದ ಅಂಗಡಿ ಕೂಡಲೇ ತೆರವು ಮಾಡಬೇಕು ಎಂದು ಒತ್ತಾಯಿಸಿ ಅ.27 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೊಲ್ಲಮೊಗ್ರದ ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ ಹೇಳಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿಯ ಉಪಾಧ್ಯಕ್ಷ ಕೆ.ಪಿ.ಗಿರಿಧರ ಅವರು ಗ್ರಾಮದ ಜನರಿಗೆ, ಗ್ರಾಮ ಪಂಚಾಯತ್ಗೆ ಗೊತ್ತಿಲ್ಲದೆ ಏಕಾಏಕಿ ಮದ್ಯದಂಗಡಿ ತೆರೆದಿರುವುದು
ಪ್ರಾಕೃತಿಕ ವಿಕೋಪದಿಂದ ತತ್ತರಿಸಿದ ಗ್ರಾಮಕ್ಕೆ ಆಘಾತ ನೀಡಿದೆ. ಕೊಲ್ಲಮೊಗ್ರದಲ್ಲಿ ಯಶಸ್ಚಿಯಾಗಿ ಎರಡು ಮದ್ಯವರ್ಜನ ಶಿಬಿರಗಳು ನಡೆದಿದ್ದು ಹಲವಾರು ಮಂದಿ ಮದ್ಯ ಮುಕ್ತಿ ಹೊಂದಿ ನವ ಜೀವನ ಸಮಿತಿಯ ಸದಸ್ಯರಾಗಿ ಉತ್ತಮ ಬದುಕು ನಡೆಸುತ್ತಿದ್ದಾರೆ. ಇದೀಗ ಮದ್ಯದಂಗಡಿ ತೆರೆಯುವ ಮೂಲಕ ಗ್ರಾಮದ ಜನರ ನೆಮ್ಮದಿಯ ಬದುಕಿಗೆ ತೊಂದರೆ ಉಂಟಾಗುವ ಆತಂಕ ಎದುರಾಗಿದೆ. 27 ರಂದು ಬೃಹತ್ ಜಾಥಾ ಮತ್ತು ಪ್ರತಿಭಟನಾ ಸಭೆ ನಡೆಯಲಿದೆ. ಮದ್ಯದಂಗಡಿ ತೆರವು ಮಾಡುವಂತೆ ಸಚಿವ ಎಸ್.ಅಂಗಾರ ಅವರಿಗೆ ಮನವಿ ನೀಡಲಾಗಿದೆ ಎಂದು ಅವರು ತಿಳಿಸಿದರು.ಮದ್ಯದಂಗಡಿಯನ್ನು ತೆರೆಯುವ ಸಂದರ್ಭದಲ್ಲಿ ಗ್ರಾಮ ಪಂಚಾಯತ್ನ ಅನಮತಿ ಖಡ್ಡಾಯ ಮಾಡಿ ಕಾನೂನು ತಿದ್ದುಪಡಿ ತರಬೇಕು ಎಂದು ಅವರು ಒತ್ತಾಯಿಸಿದರು. ಮದ್ಯದಂಗಡಿ ತೆರವು ಆಗುವ ತನಕ ಉಪವಾಸ ಸತ್ಯಾಗ್ರಹ ಸೇರಿದಂತೆ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ ಮಾತನಾಡಿ 15 ದಿನದಲ್ಲಿ ಮದ್ಯದಂಗಡಿ ಮುಚ್ಚಬೇಕು ತಪ್ಪಿದಲ್ಲಿ ನಿರಂತರ ಹೋರಾಟ ಸಂಘಟಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿಯ ಉಪಾಧ್ಯಕ್ಷ ಟಿ.ಎನ್.ಸತೀಶ್, ಸಮಿತಿಯ ಕಾನೂನು ಸಲಹೆಗಾರ ಬಾಲಸುಬ್ರಹ್ಮಣ್ಯ ಎಂ.ಜಿ, ಕಾರ್ಯದರ್ಶಿ ತೀರ್ಥರಾಮ ಡಿ, ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಸತೀಶ್ ಡಿ.ಉಪಸ್ಥಿತರಿದ್ದರು.