ಸುಳ್ಯ:ಶತಮಾನದ ಹಿಂದೆ ಆರಂಭಗೊಂಡು ಹಲವಾರು ಪ್ರತಿಭೆಗಳನ್ನು ಸಮಾಜಕ್ಕೆ ನೀಡಿರುವ ಸುಳ್ಯ ಜ್ಯೋತಿ ಸರ್ಕಲ್ನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ಪುನರ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಶಾಲಾ ನವೀಕರಣ ಸಮಿತಿಯ ಕಾರ್ಯಾಧ್ಯಕ್ಷರಾದ ಎಂ.ಬಿ.ಸದಾಶಿವ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಲೆಯನ್ನು ಆಧುನಿಕವಾಗಿ ಅಭಿವೃದ್ಧಿ ಮಾಡುವ
ಅಗತ್ಯವನ್ನು ಮನಗಂಡು ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಒಟ್ಟಾಗಿ ತಾತ್ಕಾಲಿಕ ಸಮಿತಿಯನ್ನು ರೂಪಿಸಿ ಯೋಜನೆಯ ನೀಲಿ ನಕಾಶೆಯನ್ನು ಸಿದ್ಧಪಡಿಸಲಾಗಿದೆ.ಸುರಕ್ಷಿತ ಮತ್ತು ಸುಂದರ ಪರಿಸರದಲ್ಲಿ ಅತ್ಯಾಧುನಿಕ ಮಾದರಿಯ ಶಾಲಾ ಕೊಠಡಿಗಳ ನಿರ್ಮಾಣ, ನವೀನ ಪರಿಕರಗಳು, ಬೌದ್ಧಿಕ ಕ್ರಿಯಾಶೀಲತೆಗೆ ಪೂರಕವಾಗುವ ತಂತ್ರಜ್ಞಾನದ ಅಳವಡಿಕೆ, ಕೌಶಲ್ಯ ಅಭಿವೃದ್ಧಿ, ನೈತಿಕ ಶಿಕ್ಷಣ ನೀಡುವ ಯೋಜನೆ, ಈಜುಕೊಳ, ಬಯಲು ರಂಗ ಮಂದಿರ, ಮಕ್ಕಳ ಉದ್ಯಾನ,
ಹಣ್ಣು ತರಕಾರಿಗಳ ಕೈತೋಟ ಮುಂತಾಗಿ ನಿಜ ಅರ್ಥದಲ್ಲಿ ಮಾದರಿ

ಹಿರಿಯ ಪ್ರಾಥಮಿಕ ಶಾಲೆಯನ್ನು ನಿರ್ಮಿಸುವ ಕನಸನ್ನು ಸಾಕಾರಗೊಳಿಸಲು ಕಾರ್ಯಪ್ರವೃತ್ತವಾಗಿದೆ. ಎಲ್ಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪೂರಕವಾಗುವಂತೆ ರೂಪಿಸಿ ಸುಳ್ಯದ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸುವ ಯೋಜನೆ ರೂಪಿಸಲಾಗಿದೆ. ಆರಂಭದಲ್ಲಿ ಶಾಲೆಯ ಸ್ಥಳವನ್ನು ಸರ್ವೆ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು. ಬಳಿಕ ಹಂತ ಹಂತವಾಗಿ ಶಾಲೆಯ ಅಭಿವೃದ್ಧಿ ಮಾಡಲಾಗುವುದು. ಊರ, ಪರ ಊರ ವಿದ್ಯಾಭಿಮಾನಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು
ಈ ಮಹತ್ಕಾರ್ಯದಲ್ಲಿ ಕೈ ಜೋಡಿಸಬೇಕೆಂದು ಅವರು ವಿನಂತಿಸಿದರು.
ಸರಕಾರಿ ಅನುದಾನ, ಕಂಪೆನಿಗಳ ಸಿಎಸ್ಆರ್ ಫಂಡ್, ಸಾರ್ವಜನಿಕ ಅನುದಾನ ಸೇರಿ ಸಂಪನ್ಮೂಲ ಕ್ರೂಢೀಕರಿಸಿ ಸುಮಾರು 3 ಕೋಟಿ ರೂಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಬೇರೆ ಬೇರೆ ಕಡೆಯ ಅತ್ಯುತ್ತಮ ಶಾಲೆ ಹೇಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಮಾದರಿ ಶಾಲೆಯನ್ನಾಗಿ ರೂಪಿಸುವ ಕಲ್ಪನೆ ಇದೆ. ಶಾಲೆಯ ಎಲ್ಲಾ ಹಳೆ ವಿದ್ಯಾರ್ಥಿಗಳ ಸಹಕಾರ, ಸಲಹೆಯನ್ನು ಕೋರುತ್ತೇವೆ ಎಂದು ಹೇಳಿದರು.

ನವೀಕರಣ ಸಮಿತಿಯ ಸಂಚಾಲಕರಾದ ಆರ್.ಕೆ
ಭಟ್’ ಮಾತನಾಡಿ ಶಾಲೆಯು ಸಮಾಜದ ಆಸ್ತಿ. ಸುಳ್ಯದ ಮಾದರಿ ಶಾಲೆಯನ್ನು ಮೋಡೆಲ್ ಆಗಿ ರೂಪಿಸುವ ಯೋಜನೆ ಇದೆ ಎಂದು ಹೇಳಿದರು.ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳುಕಛೇರಿಯ ಮೊಬೈಲ್ ಸಂಖ್ಯೆ 9035299466 ಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಲು ಕೋರಲಾಗಿದೆ ಎಂದು ಆರ್.ಕೆ.ಭಟ್ ತಿಳಿಸಿದ್ದಾರೆ.

ನೂತನ ಸಮಿತಿ ರಚನೆ:
ಶಾಲಾ ನವೀಕರಣ ಸಮಿತಿ ರಚಿಸಲಾಗಿದ್ದು ಡಾ. ಕೆ.ವಿ ಚಿದಾನಂದ ಅಚರು ಗೌರವಾಧ್ಯಕ್ಷರಾಗಿರುತ್ತಾರೆ.ಎಂ.ಬಿ.ಸದಾಶಿವ ಕಾರ್ಯಾಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಅಶೋಕ್ ಪ್ರಭು, ಡಾ. ರಂಗಯ್ಯ, ರವಿರಾಜ್ ಕಮಿಲಡ್ಕ, ಎಂ.ಎಸ್ ಪುರುಷೋತ್ತಮ, ಕಮಲಾಕ್ಷಿ.ಕಾರ್ಯದರ್ಶಿಗಳಾಗಿ ಕೆ.ಗೋಕುಲ್ ದಾಸ್, ಅಬ್ದುಲ್ ರಶೀದ್ ಜಟ್ಟಿಪಳ್ಳ, ಸುನಂದಾ ಶೆಟ್ಟಿ,ಖಜಾಂಚಿಯಾಗಿ ಡಾ.ಸಾಯಿಗೀತ ಜ್ಞಾನೇಶ್, ಮಮತಾ ರವೀಶ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಸ್ಮಿತ ಜಾಕೆ, ಸುಮತಿ ನಾಯಕ್,
ಖಲಂದರ್ ಶಾ, ಎಂ.ಎಸ್ ಜಯಪ್ರಕಾಶ್ ಬಾಲಕೃಷ್ಣ, ವಿಜಯಾನಂದ ಆಯ್ಕೆಯಾಗಿರುತ್ತಾರೆ.ಸಂಚಾಲಕರಾಗಿ ಆರ್.ಕೆ ಭಟ್ ಕಾರ್ಯ ನಿರ್ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಡಾ. ರಂಗಯ್ಯ, ರವಿರಾಜ್ ಕಮಿಲಡ್ಕ,
ಕಾರ್ಯದರ್ಶಿಗಳಾದ ಕೆ.ಗೋಕುಲ್ ದಾಸ್, ಅಬ್ದುಲ್ ರಶೀದ್ ಜಟ್ಟಿಪಳ್ಳ, ಖಜಾಂಚಿ ಡಾ.ಸಾಯಿಗೀತ ಜ್ಞಾನೇಶ್ ಉಪಸ್ಥಿತರಿದ್ದರು.









