ಸುಳ್ಯ:ಸುಳ್ಯ ತಾಲೂಕಿನ ಮಡಪ್ಪಾಡಿ ಸಮೀಪದ ಶೀರಡ್ಕ ಭಾಗದಲ್ಲಿ ಕಂಡು ಬಂದ ಕಾಡ್ಗಿಚ್ಚು ನಿಯಂತ್ರಿಸಲು ಅರಣ್ಯ ಇಲಾಖೆಯ ತಂಡ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆಯಿಂದ ಶೀರಡ್ಕ ಭಾಗದಲ್ಲಿ ಕಾಡ್ಗಿಚ್ಚು ಸದ್ಯ ನಿಯಂತ್ರಣಕ್ಕೆ ಬಂದಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಮಾಹಿತಿ ನೀಡಿದ್ದಾರೆ.
ಬೆಂಕಿ ನಂದಿಸುವುದರ ಜೊತೆಗೆ ಬೆಂಕಿ ಮತ್ತಷ್ಟು

ವಿಸ್ತರಿಸದಂತೆ ಬ್ಲೋವರ್ ಮುಖಾಂತರ ತರಗೆಲೆ ಬದಿಗೆ ಸರಿಸಲು ಪ್ರಯತ್ನ ನಡೆಸಲಾಗುತಿದೆ. ರಾಶಿಗಟ್ಟಲೆ ತುಂಬಿರುವ ತರಗೆಲೆಗಳನ್ನು ಸರಿಸಿ ಬೆಂಕಿಯ ಕೆನ್ನಾಲಿಗೆ ಹರಡದಂತೆ ಎಚ್ಚರಿಕೆ ವಹಿಸಲಾಗುತಿದೆ. ಕಳೆದ ಒಂದು ವಾರದಿಂದ ಮಡಪ್ಪಾಡಿಯ ಹಾಡಿಕಲ್ಲು,ಶೀರಡ್ಕ ಭಾಗದಲ್ಲಿ ಪದೇ ಪದೇ ಕಾಡ್ಗಿಚ್ಚು ಕಂಡು ಬಂದಿತ್ತು. ಭಾನುವಾರ ಶೀರಡ್ಕ ಭಾಗದಲ್ಲಿ ಭಾರೀ
ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಠಿಯಾಗಿತ್ತು. ಅರಣ್ಯ ಇಲಾಖೆಯ ತಂಡ ಕಳೆದ ಕೆಲವು ದಿನಗಳಿಂದ ಸ್ಥಳದಲ್ಲಿ ಕ್ಯಾಂಪ್ ಮಾಡಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಾ ಬಂದಿದ್ದಾರೆ. ನಿನ್ನೆ ಮತ್ತು ಇಂದು ಅರಣ್ಯ ಇಲಾಖೆಯ ಹೆಚ್ಚು ಮಂದಿ ಸಿಬ್ಬಂದಿಗಳು ಸ್ಥಳದಲ್ಲಿ ಕ್ಯಾಂಪ್ ಮಾಡಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸ್ಥಳೀಯರು ಕೈ ಜೋಡಿಸಿದ್ದಾರೆ.
