ಸುಳ್ಯ: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದು ಸರಕಾರ ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರವನ್ನು ಮೊಟಕು ಗೊಳಿಸಿರುವುದು ಖಂಡನೀಯ. ಇದರಿಂದ ಗ್ರಾಮ ಪಂಚಾಯತ್ಗಳ ಅಭಿವೃದ್ಧಿ ಕುಂಠಿತವಾಗಲಿದೆ ಮತ್ತು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಮಗಾರಿ ನಡೆಸಿದ ಬಿಲ್
ಪಾವತಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಜಂಟಿಯಾಗಿ ಸಹಿ ಮಾಡಬೇಕಿತ್ತು. ಆದರೆ ಇದೀಗ ಅಧ್ಯಕ್ಷರ ಅಧಿಕಾರವನ್ನು ಕಿತ್ತು ಕೊಳ್ಳಲಾಗಿದೆ ಮತ್ತು ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗೆ ನೀಡಲಾಗಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ಎಂದು ಹೇಳಿದ ಅವರು ಇದರಿಂದ ಗ್ರಾಮ ಪಂಚಾಯತ್ನಲ್ಲಿ ಜನಪ್ರತಿನಿಧಿಗಳ ನಿಯಂತ್ರಣವನ್ನು ಕಡಿತಗೊಳಿಸಿದಂತಾಗುತ್ತದೆ ಮತ್ತು ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಜನರಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು. ಅಲ್ಲದೆ ಮೊದಲೆಲ್ಲ ಒಂದು ವಾರ್ಡ್ನಲ್ಲಿ 3-4 ಮಂದಿ ಸದಸ್ಯರ ಆಯ್ಕೆಗೆ ಅವಕಾಶ ಇತ್ತು. ಇನ್ನು ಒಂದು ವಾರ್ಡ್ಗೆ ಒಬ್ಬನೇ ಸದಸ್ಯ ಇರಲಿದ್ದು ಇದರಿಂದ ಹಲವರ ಅವಕಾಶ ಕಸಿದು ಕೊಂಡಂತಾಗುತ್ತದೆ.15 ನೇ

ಹಣಕಾಸು ಅನುದಾನ ಹೊರತು ಪಡಿಸಿ ಪಂಚಾಯತ್ಗೆ ಅಭಿವೃದ್ಧಿಗೆ ಯಾವುದೇ ಅನುದಾನ ಬರ್ತಾ ಇಲ್ಲ. 15ನೇ ಹಣಕಾಸಿನಲ್ಲಿಯೂ ಕಡಿತ ಮಾಡಲಾಗುತ್ತಿದೆ. ಬಂದ ಅನುದಾನದಲ್ಲಿಯೂ ಶೇ.18 ಜಿಎಸ್ಟಿ ಕಟ್ಟಬೇಕಾಗಿದೆ. ಇದರಿಂದ ಅಭಿವೃದ್ಧಿ ಅನುದಾನ ಇನ್ನಷ್ಟು ಕಡಿತ ಆಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಸರಕಾರ ಗ್ರಾಮ ಪಂಚಾಯತ್ಗಳಿಗೆ ಹೆಚ್ಚು ಅಧಿಕಾರ ಮತ್ತು ಅನುದಾನವನ್ನು ನೀಡಿ ಸ್ಥಳೀಯ ಸಂಸ್ಥೆಗಳನ್ನು ಬಲ ಪಡಿಸಿತ್ತು. ಆದರೆ ಬಿಜೆಪಿ ಸರಕಾರ ಅಧಿಕಾರವನ್ನು ಮೊಟಕು ಮಾಡಿ, ಅನುದಾನವನ್ನು ಕಡಿತ ಮಾಡಿ ಪಂಚಾಯತ್ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡುತಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಗೆ ಸಿದ್ಧತೆ-12ಕ್ಕೆ ಸಭೆ:
ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ರಾಜ್ ಶೆಟ್ಟಿ ಮಾತನಾಡಿ ಸುಳ್ಯ ತಾಲೂಕಿನ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಪ್ರಜಾಪ್ರತಿನಿಧಿ ಒಕ್ಕೂಟವನ್ನು ಸ್ಥಾಪನೆ ಮಾಡಿ ಗ್ರಾ.ಪಂ.ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿರುವುಸುವುದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದರು.ತಾಲೂಕು ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಈ ಕುರಿತು ಚರ್ಚಿಸಲು ಅ.12ರಂದು ಶಿವಕೃಪಾ ಹಾಲ್ನಲ್ಲಿ ಸಭೆ ಕರೆಯಲಾಗಿದೆ. ಪಕ್ಷಾತೀತವಾಗಿ ಎಲ್ಲಾ ಗ್ರಾ.ಪಂ.ಸದಸ್ಯರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷೆ ಹಾಜಿರಾ ಅಬ್ದುಲ್ ಗಫೂರ್, ಉಬರಡ್ಕ ಮಿತ್ತೂರು ಗ್ರಾ.ಪಂ.ಅಧ್ಯಕ್ಷೆ ಚಿತ್ರಾ ಕುಮಾರಿ, ಅಜ್ಜಾವರ ಗ್ರಾ.ಪಂ.ಉಪಾಧ್ಯಕ್ಷೆ ಲೀಲಾ ಮನಮೋಹನ್, ಜಯಪ್ರಕಾಶ್ ನೆಕ್ರಪ್ಪಾಡಿ,ಎನ್.ಎಸ್.ಡಿ.ವಿಠಲದಾಸ್, ಅನಿಲ್ ಬಳ್ಳಡ್ಕ, ಮಣಿಕಂಠ, ಕಾಂಗ್ರೆಸ್ ಮಾಧ್ಯಮ ಸಂಯೋಜಕ ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.
ಸಚಿವರು ಪ್ರತಿ ಗ್ರಾ.ಪಂ.ಗೆ ಒಂದು ಕೋಟಿ ಅನುದಾನ ತರಿಸಲಿ:
ಗ್ರಾಮ ಪಂಚಾಯತ್ಗಳಿಗೆ ಅಭಿವೃದ್ಧಿಗೆ ಯಾವುದೇ ಅನುದಾನಗಳು ಈಗ ಬರುತ್ತಿಲ್ಲ. ಇದರಿಂದ ಗ್ರಾಮ ಪಂಚಾಯತ್ ಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಆದುದರಿಂದ ಸುಳ್ಯ ಶಾಸಕರು ಹಾಗು ಸಚಿವರಾದ ಎಸ್.ಅಂಗಾರ ಅವರು ಸುಳ್ಯ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ಗಳಿಗೆ ಅಭಿವೃದ್ಧಿಗೆ ತಲಾ ಒಂದು ಕೋಟಿ ಅನುದಾನ ತರಿಸಿ ಎಂದು ಎಂ. ವೆಂಕಪ್ಪ ಗೌಡ ಆಗ್ರಹಿಸಿದರು. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಗ್ರಾಮ ವಿಕಾಸ ಯೋಜನೆಯಡಿ ಪಂಚಾಯತ್ಗಳನ್ನು ಆಯ್ಕೆ ಮಾಡಿ 75 ಲಕ್ಷ ಅನುದಾನ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರಕಾರ ಪಂಚಾಯತ್ಗಳಿಗೆ ಯಾವುದೇ ವಿಶೇಷ ಅನುದಾನ ನೀಡುತ್ತಿಲ್ಲ ಎಂದು ಅವರು ಹೇಳಿದರು.