ಸುಳ್ಯ:ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರ ಬಹಿರಂಗ ಪ್ರಚಾರ ನಡೆಸದೆ ಪಕ್ಷದ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತು ಸಮಿತಿ ನೀಡಿದ ಶೋಕಾಸ್ ನೋಟೀಸ್ಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಉತ್ತರ ನೀಡಿದ್ದಾರೆ. ಆರೋಪವನ್ನು ನಿರಾಕರಿಸಿರುವ ವೆಂಕಪ್ಪ ಗೌಡರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರುವುದಕ್ಕೆ ಭಾವಚಿತ್ರಗಳ ಸಹೀತ ವಿವರಣೆ
ನೀಡಿದ್ದಾರೆ.ಬಹಿರಂಗ ಪ್ರಚಾರದಲ್ಲಿ, ಮನೆ ಮನೆ ಭೇಟಿ ಸೇರಿದಂತೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ, ಚುನಾವಣಾ ಪ್ರಚಾರ ಜಾಥಾ ಸಂಘಟಿಸಿದ ಅದರಲ್ಲಿ ಭಾಗವಹಿಸಿದ ಸಂಪೂರ್ಣ ವಿವರಗಳನ್ನು ಭಾವಚಿತ್ರ ಸಮೇತ ಶಿಸ್ತು ಸಮಿತಿಗೆ ಉತ್ತರ ರೂಪದಲ್ಲಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಜನಪ್ರತಿನಿಧಿಯಾಗಿ ಸಲ್ಲಿಸಿದ ಸೇವಾ ಕಾರ್ಯಗಳನ್ನು ಸವಿವರವಾಗಿ ವಿವರಿಸಿದ್ದಾರೆ. ಸುಳ್ಯದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಸಂದರ್ಭದಲ್ಲಿ ಉಂಟಾದ ಅಸಮಾಧಾನದಿಂದ ಪಕ್ಷದಲ್ಲಿ ಉಂಟಾಗಿದ್ದ ಗೊಂದಲವನ್ನು ಸರಿಪಡಿಸಲು ರಾಜ್ಯ ನಾಯಕರನ್ನು ಭೇಟಿ ಮಾಡಿದ, ಅಸಮಾಧಾನಿತರನ್ನು ಭೇಟಿ ಮಾಡಿ ಸಮಾಧಾನ ಪಡಿಸಿದ ವಿಚಾರಗಳನ್ನು ಚಿತ್ರ ಸಮೇತ ಉತ್ತರದಲ್ಲಿ ವಿವರಿಸಲಾಗಿದೆ. ಮಡಿಕೇರಿಯ ಉಸ್ತುವಾರಿ ಇದ್ದರೂ ಸುಳ್ಯದಲ್ಲಿ ಅಭ್ಯರ್ಥಿ ಗೆಲ್ಲಬೇಕೆಂದು ಹೆಚ್ಚಿನ ಸಮಯವನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳಲಾಗಿದ್ದೆ ಎಂದು ವಿವರಿಸಿದ್ದಾರೆ. ಗ್ಯಾರಂಟಿ ಕಾರ್ಡ್ ವಿತರಣೆಯಲ್ಲಿನ ಸಾಧನೆ, ತನ್ನ ಬೂತ್ನಲ್ಲಿ ಕಾಂಗ್ರೆಸ್ ಲೀಡ್ ಪಡೆದ ವಿಚಾರ, ಸುಳ್ಯದಲ್ಲಿ ಪ್ರಮಾಣ ವಚನ ಸಂದರ್ಭದಲ್ಲಿ ಸುಳ್ಯದಲ್ಲಿ ವಿಜಯೋತ್ಸವ, ನೇರ ಪ್ರಚಾರ ಸಂಘಟಿಸಿದ ವಿಷಯಗಳನ್ನು ಭಾವಚಿತ್ರ ಸಮೇತ ಸಲ್ಲಿಸಲಾಗಿದೆ.
ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಅವರು ಕೇವಲ 1373 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು ಎಂಬ ವಿಷಯವನ್ನು ಉಲ್ಲೇಖಿಸಲಾಗಿದೆ. ಸುಮಾರು 15 ಅಂಶಗಳನ್ನು ಒಳಗೊಂಡ ಉತ್ತರವನ್ನು ವೆಂಕಪ್ಪ ಗೌಡರು ಶಿಸ್ತು ಸಮಿತಿಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.