ಹೈದರಾಬಾದ್: ನಿಕೋಲಸ್ ಪೂರನ್ (70) ಹಾಗೂ ಮಿಚೆಲ್ ಮಾರ್ಷ್ (52) ಬಿರುಸಿನ ಅರ್ಧಶತಕಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ದ ನಡೆದ ಐಪಿಎಲ್ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಜಯ ಗಳಿಸಿದೆ.
ಆ ಮೂಲಕ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ರಿಷಭ್ ಪಂತ್ ಗೆಲುವಿನ ನಗೆ ಬೀರಿತು.ಮತ್ತೊಂದೆಡೆ ಮೊದಲ ಪಂದ್ಯದಲ್ಲಿ
ಭರ್ಜರಿ ಜಯ ಕಂಡಿದ್ದ ಸನ್ರೈಸರ್ಸ್ ಎರಡನೇ ಪಂದ್ಯದಲ್ಲಿ ಸೋಲನುಭವಿಸಿತು.ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಒಂಬತ್ತು ವಿಕೆಟ್ ನಷ್ಟಕ್ಕೆ 190 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಲಖನೌ 16.1 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ಪೂರನ್ ಕೇವಲ 26 ಎಸೆತಗಳಲ್ಲಿ ತಲಾ ಆರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ಅಬ್ಬರಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಮಾರ್ಷ್, 31 ಎಸೆತಗಳಲ್ಲಿ 52 ರನ್ (7 ಬೌಂಡರಿ, 2 ಸಿಕ್ಸರ್) ಗಳಿಸಿದರು. ಹೈದರಾಬಾದ್ ಸನ್ರೈಸರ್ಸ್ ತಂಡದ ಬ್ಯಾಟರ್ಗಳನ್ನು ಲಖನೌ ಸೂಪರ್ ಜೈಂಟ್ಸ್ ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಕಾಡಿದರು.
ಇದರಿಂದ ಎಸ್ಆರ್ಎಚ್ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 190 ರನ್ ಗಳಿಸಿತು. ಠಾಕೂರ್ (4–0–34–4) ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದರು. ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ (47;28ಎ, 4X5, 6X3) ಬೀಸಾಟ ಆಡಿದರೆ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಬೆಗನೇ ಔಟ್ ಆದರು.ಬಳಿಕ ಹೆಡ್ ಮತ್ತು ಅವರೊಂದಿಗೆ ಸೇರಿಕೊಂಡ ನಿತೀಶ್ ರೆಡ್ಡಿ (32; 28ಎ, 4X2) ರನ್ ಗಳಿಕೆಗೆ ಒತ್ತು ನೀಡಿದರು. 3ನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು. ಹೆನ್ರಿಚ್ ಕ್ಲಾಸ್ (26; 17ಎ, 4X2, 6X1), ಅನಿಕೇತ್ ವರ್ಮಾ (36; 13ಎಸೆತ) ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ಮಾಡಿದರು. ಅದರಲ್ಲೂ ಅನಿಕೇತ್ 5 ಸಿಕ್ಸರ್ಗಳನ್ನು ಸಿಡಿಸಿದರು.ಆದರೆ ಕೊನೆಯ ಆರು ಓವರ್ಗಳಲ್ಲಿ 5 ವಿಕೆಟ್ಗಳು ಪತನಗೊಂಡವು.
ಈ ನಡುವೆ ನಾಯಕ ಪ್ಯಾಟ್ ಕಮಿನ್ಸ್ ಕೇವಲ 4 ಎಸೆತಗಳಲ್ಲಿ 3 ಸಿಕ್ಸರ್ ಸಹೀತ 18 ರನ್ ಗಳಿಸಿದರು. ಹರ್ಷಲ್ ಪಟೇಲ್ ಕೂಡ 11 ಎಸೆತಗಳಲ್ಲಿ 12 ರನ್ ಗಳಿಸಿದರು. ಇದರಿಂದಾಗಿ ತಂಡಕ್ಕೆ ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು.