ಬೆಂಗಳೂರು: ಲಖನೌ ಸೂಪರ್ ಜೈಂಟ್ಸ್ ತಂಡವು 28 ರನ್ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಿಸಿತು. 182 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಬೆಂಗಳೂರು ತಂಡವು 19.4 ಓವರ್ಗಳಲ್ಲಿ 153 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಆರ್ಸಿಬಿ ಟೂರ್ನಿಯಲ್ಲಿ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ಮೂರನೇ ಸೋಲು ಅನುಭವಿಸಿತು.ವಿರಾಟ್ ಕೊಹ್ಲಿ (22) ಮತ್ತು ಫಫ್ ಡುಪ್ಲೆಸಿ (19 ರನ್) ಉತ್ತಮ ಆರಂಭ ನೀಡಿದರು. ಇಂಪ್ಯಾಕ್ಟ್ ಪ್ಲೇಯರ್ ಮಹಿಪಾಲ್
ಲೊಮ್ರೊರ್ (33; 13ಎ) ಅವರ ಪ್ರಯತ್ನವೂ ಆರ್ಸಿಬಿಗೆ ಜಯ ತಂದುಕೊಡಲಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಕ್ಯಾಮರಾನ್ ಗ್ರೀನ್ ನಿರಾಸೆ ಮೂಡಿಸಿದರು. ವೇಗದ ಬೌಲಿಂಗ್ನ 21 ವರ್ಷದ ನವತಾರೆ ಮಯಂಕ್ ಯಾದವ್ ಅಮೋಘ (4–0–14–3) ಬೌಲಿಂಗ್ನಿಂದಾಗಿ ಲಖನೌ ಸುಲಭ ಜಯ ದಾಖಲಿಸಿತು.
ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮತ್ತು ಸ್ಪೋಟಕ ಬ್ಯಾಟರ್ ನಿಕೊಲಸ್ ಪೂರನ್ ಅವರ ಕ್ಯಾಚ್ಗಳನ್ನು ಕೈಚೆಲ್ಲಿದ ಅರ್ಸಿಬಿಗೆ ದುಬಾರಿಯಾದವು. ಕ್ವಿಂಟನ್ (81; 56ಎ, 4X8, 6X5) ಹಾಗೂ ಪೂರನ್ (ಔಟಾಗದೆ 40; 21ಎ, 4X1, 6X5) ಅವರಿಬ್ಬರ ಅಬ್ಬರದ ಬ್ಯಾಟಿಂಗ್ನಿಂದಾಗಿ ಲಖನೌ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 181 ರನ್ ಗಳಿಸಿತು. ಪೂರನ್ ಇನಿಂಗ್ಸ್ನ ಕೊನೆಯ ಎರಡು ಓವರ್ಗಳಲ್ಲಿ ಐದು ಸಿಕ್ಸರ್ಗಳನ್ನು ಎತ್ತಿದರು.
ಇನಿಂಗ್ಸ್ನ ಕೊನೆಯ ಐದು ಓವರ್ಗಳಲ್ಲಿ 50 ರನ್ ಹರಿದುಬರಲು ನಿಕೋಲಸ್ ಪೂರನ್ ಕಾರಣರಾದರು.
19ನೇ ಓವರ್ನಲ್ಲಿ ಪೂರನ್ ‘ಸಿಕ್ಸರ್ ಹ್ಯಾಟ್ರಿಕ್’ ಸಾಧಿಸಿದರು. ಅದರಲ್ಲಿ ಒಂದು ಸಿಕ್ಸರ್ನ ಚೆಂಡು ಡೀಪ್ ಮಿಡ್ವಿಕೆಟ್ ಮೇಲಿನ ಗ್ಯಾಲರಿಯ ಚಾವಣಿ ದಾಟಿ ಹೊರಗೆ ಹೋಗಿಬಿತ್ತು. ಕೊನೆಯ ಓವರ್ನಲ್ಲಿ ಸಿರಾಜ್ ಮೊದಲ ಮೂರು ಎಸೆತಗಳನ್ನು ಡಾಟ್ ಮಾಡಿದ್ದರು. ಆದರೆ ನಂತರದ ಎರಡೂ ಎಸೆತಗಳನ್ನು ಪೂರನ್ ಸಿಕ್ಸರ್ಗೆತ್ತಿದರು.