ಲಖನೌ: ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡ 12ರನ್ಗಳ ರೋಚಕ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ಗಳ ಉತ್ತಮ ಮೊತ್ತ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಮುಂಬೈ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ 12 ರನ್ ಸೋಲೊಪ್ಪಿಕೊಂಡಿತು. ಮುಂಬೈಗೆ ಆರಂಭಿಕ ಆಘಾತ
ಎದುರಾಯಿತು. 17 ರನ್ ಗಳಿಸುವಷ್ಟರಲ್ಲಿ ವಿಲ್ ಜಾಕ್ಸ್ ಹಾಗು ರಿಕೆಲ್ಟನ್ ಔಟ್ ಆದರು. ಬಳಿಕ ನಮನ್ ಧೀರ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಮೂಲಕ ಬಲ ತುಂಬಿದರು. ನಮನ್ ಧೀರ್ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 46 ರನ್ ಸಿಡಿಸಿದರು. ಆಕರ್ಷಕ ಅರ್ಧ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಹೋರಾಟ ವ್ಯರ್ಥವಾಯಿತು. ಸೂರ್ಯ 43 ಎಸೆತಗಳಲ್ಲಿ 9 ಬೌಂಡರಿ ಹಾಗೂ1 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು. ತಿಲಕ್ ವರ್ಮ ಜೊತೆ ಉತ್ತಮ ಜೊತೆಯಾಟ ಕಟ್ಟಿದ ಸೂರ್ಯಕುಮಾರ್ ಮುಂಬೈ ಸ್ಕೋರ್ ಏರಿಸಿದರು. ಆದರೆ ಸೂರ್ಯ ಔಟ್ ಆದ ಬಳಿಕ ಮುಂಬೈ ಸ್ಕೋರ್ನ ವೇಗ ಕುಂಠಿತವಾಯಿತು. ತಿಲಕ್ ವರ್ಮ 23 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 25 ರನ್ ಗಳಿಸಿ ರಿಟೈರ್ಡ್ ಔಟ್ ಆದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 28 ರನ್ ಗಳಿಸಿ ಹೋರಾಟ ನಡೆಸಿದರೂ ಗೆಲುವು ಸಾಧ್ಯವಾಗಲಿಲ್ಲ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಖನೌ ಆರಂಭಿಕ ಆಟಗಾರರು ಅಬ್ಬರದ ಬ್ಯಾಟಿಂಗ್ ನಡೆಸಿದರು.ಆರಂಭಿಕರಾದ ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿ ಸಹಿತ 60 ರನ್ ಸಿಡಿಸಿದರೆ, ಏಡೆನ್ ಮರ್ಕ್ರಮ್ 38 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 53 ರನ್ ಸಿಡಿಸಿದರು. ಬಳಿಕ, ಆಯುಶ್ ಬದೋನಿ 19 ಎಸೆತಗಳಲ್ಲಿ 30 ಮತ್ತು ಡೇವಿಡ್ ಮಿಲ್ಲರ್ 14 ಎಸೆತಗಲಲ್ಲಿ 27 ರನ್ ಸಿಡಿಸಿ ತಂಡದ ಉತ್ತಮ ಮೊತ್ತಕ್ಕೆ ನೆರವಾದರು.ಅಂತ್ಯದಲ್ಲಿ ನಿರೀಕ್ಷಿಸಿದಷ್ಟು ರನ್ ಬರಲಿಲ್ಲ. ಅಂತಿಮವಾಗಿ 20 ಓವರ್ಗಳ ಅಂತ್ಯಕ್ಕೆ ಲಖನೌ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.ಮುಂಬೈ ಪರ ಹಾರ್ದಿಕ್ ಪಾಂಡ್ಯ 35 ರನ್ ನೀಡಿ 5 ವಿಕೆಟ್ ಉರುಳಿಸಿದರು.