ಸುಳ್ಯ:ಲೋಕಸಭಾ ಚುನಾವಣೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಏ.26ರಂದು ನಡೆಯುವ ಲೋಕಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಇವಿಎಂ, ವಿವಿ ಪ್ಯಾಟ್ ಹಾಗೂ ಇತರ ಸಾಮಾಗ್ರಿಗಳೊಂದಿಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತಗಟ್ಟೆಗಳಿಗೆ ತೆರಳಿದ್ದಾರೆ. ಮಸ್ಟರಿಂಗ್ ಕೇಂದ್ರವಾದ
ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಿಂದ
ಸುಳ್ಯ ವಿಧಾನಸಭಾ ಕ್ಷೇತ್ರದ 233 ಬೂತ್ಗಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಧ್ಯಾಹ್ನದ ವೇಳೆಗೆ ತೆರಳಿದರು. ಬಸ್, ಮಿನಿ ಬಸ್, ಜೀಪ್ ಸೇರಿ 82 ವಾಹನಗಳಲ್ಲಿ ತೆರಳಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಕೆ.ಜಗದೀಶ್ ನಾಯ್ಕ್, ತಹಶೀಲ್ದಾರ್ ಜಿ.ಮಂಜುನಾಥ್ ನೇತೃತ್ವದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿತು.
ಚುನಾವಣೆಗೆ 1120 ಅಧಿಕಾರಿಗಳು, 188 ಹೆಚ್ಚುವರಿ ಅಧಿಕಾರಿಗಳು ಹಾಗೂ 233 ಡಿಗ್ರೂಪ್ ನೌಕರರನ್ನು ಹಾಗೂ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಮತಗಟ್ಟೆಗಳಲ್ಲಿ ಒಬ್ಬರು ಅಧ್ಯಕ್ಷ ಅಧಿಕಾರಿ, ಮೊದಲನೇ ಮತದಾನ ಅಧಿಕಾರಿ, ಇಬ್ಬರು ಮತದಾನ ಅಧಿಕಾರಿಗಳು ಹಾಗೂ ಡಿಗ್ರೂಪ್ ನೌಕರರು ಹಾಗೂ ಭದ್ರತಾ ಸಿಬ್ಬಂದಿಗಳು ಇರಲಿದ್ದಾರೆ.1200 ಕ್ಕಿಂತ ಹೆಚ್ಚು ಮತಗಳು ಇರುವ ಮತಗಟ್ಟೆಗಳಲ್ಲಿ ಹೆಚ್ಚುವರಿ ಮತದಾನ ಅಧಿಕಾರಿ ನೇಮಕ ಮಾಡಲಾಗುವುದು.
177 ಕಡೆ ವೆಬ್ ಕಾಸ್ಟಿಂಗ್:
ವಿಧಾನಸಭಾ ಕ್ಷೇತ್ರದ 177 ಬೂತ್ಗಳಲ್ಲಿ ವೆಬ್ ಕಾಸ್ಟಿಂಗ್ ನಡೆಸಲಾಗುವುದು. 233 ಮತಗಟ್ಟೆಗಳಿಗೆ 47 ಹೆಚ್ಚುವರಿ ಇವಿಎಂ ಸೇರಿ ಒಟ್ಟು 280 ಮತ ಯಂತ್ರಗಳನ್ನು ನೀಡಲಾಗಿದೆ. 23 ಸೆಕ್ಟರ್ಗಲ್ಲಿ ತಲಾ ಎರಡು ಇವಿಎಂ ಹೆಚ್ಚುವರಿಯಾಗಿ ನೀಡಲಾಗುತ್ತದೆ.
2.08 ಲಕ್ಷ ಮತದಾರರು:
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 1,02,854 ಪುರುಷ ಮತದಾರರು ಹಾಗೂ 1,05,999 ಮಹಿಳಾ ಮತದಾರರು ಸೇರಿ ಒಟ್ಟು 2.08,853 ಮತದಾರರು ಇದ್ದಾರೆ.
ಒಟ್ಟು 9 ಮಾದರಿ ಮತಗಟ್ಟೆಗಳಿವೆ.
5 ಸಖಿ ಮತಗಟ್ಟೆಗಳು, ತಲಾ ಒಂದು ಯಕ್ಷಗಾನ, ಯುವ, ಪಿಡಬ್ಲ್ಯಡಿ, ಧ್ಯೆಯ ಮತಗಟ್ಟೆಗಳವೆ.