ಮಂಗಳೂರು:ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಇಂಧನ ಅಭಾವ ಎದುರಾಗಿರುವ ಸಂದರ್ಭದಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಹೊತ್ತ ಹಡಗು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಭಾನುವಾರ ಬಂದಿದೆ. ಕಚ್ಚಾ ತೈಲ ಹೊತ್ತ ಇನ್ನೊಂದು
ಹಡಗು ಶನಿವಾರ ರಾತ್ರಿ ಮಂಗಳೂರು ತಲುಪಿದೆ. ಪೈಕ್ಸಿಸ್ ಪಯೋನಿಯರ್ ಹೆಸರಿನ ಹಡಗು ಒಟ್ಟು 47,236 ಟನ್ ಎಲ್ಪಿಜಿ ಹೊತ್ತು ತಂದಿದೆ. ಇದು ಅಮೆರಿಕದ ಟೆಕ್ಸಾಸ್ ಬಂದರಿನಿಂದ ಫೆ.14ರಂದು ಪ್ರಯಾಣ ಆರಂಭಿಸಿತ್ತು.
ನವ ಮಂಗಳೂರು ಬಂದರು (ಎನ್ಎಂಪಿ)ನಲ್ಲಿ ಈ ಹಡಗಿನಿಂದ 16,714 ಟನ್ ಎಲ್ಪಿಜಿಯನ್ನು ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್ಗೆ ಇಳಿಸಲಾಗುತ್ತಿದೆ. ಅಲ್ಲದೆ ರಷ್ಯಾದ ತೈಲ ತುಂಬಿದ ‘ಅಕ್ವಾ ಟೈಟಾನ್’ ಹಡಗು ಶನಿವಾರ ರಾತ್ರಿ ಇಲ್ಲಿಗೆ ಬಂದಿದೆ. ಭಾನುವಾರ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್)ಗೆ 96,099.80 ಟನ್ ಕಚ್ಚಾ ತೈಲವನ್ನು ಇಳಿಸಿದೆ ಎಂದು ಎಂಆರ್ಪಿಎಲ್ ಮೂಲಗಳು ತಿಳಿಸಿವೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಈ ಇಂಧನ ನೌಕೆಗಳ ಆಗಮನವು ರಾಜ್ಯದ ಇಂಧನ ಅಭಾವ ಕಡಿಮೆ ಮಾಡಲು ಅತ್ಯಂತ ಮಹತ್ವದ್ದಾಗಿದೆ.














