ನವದೆಹಲಿ:ಅಡುಗೆ ಅನಿಲ (ಎಲ್ಪಿಜಿ) ಸಾಗಿಸುವ, ಭಾರತದ ಧ್ವಜ ಹೊಂದಿರುವ ಎರಡು ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಇರಾನ್ ಶುಕ್ರವಾರ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಇರಾನ್ನ ನಿರ್ಧಾರವು ಭಾರತದಲ್ಲಿ ತಲೆದೋರಿರುವ ಅಡುಗೆ ಅನಿಲ ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ನೆರವಾಗಲಿದೆ. ಸೌದಿ ಅರೇಬಿಯಾದ ತೈಲ ಹೊತ್ತು ತರುತ್ತಿರುವ ಇನ್ನೊಂದು
ಹಡಗು ಹೊರ್ಮುಜ್ ಜಲಸಂಧಿ ದಾಟಿದ್ದು, ಶನಿವಾರ ಭಾರತ ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.
ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿರುವ ಭಾರತದ ಧ್ವಜ ಹೊಂದಿರುವ 28 ಹಡಗುಗಳಲ್ಲಿ ಒಂದು ಹಡಗು ಸುರಕ್ಷಿತವಾಗಿ ಜಲಸಂಧಿಯನ್ನು ದಾಟಿದೆ.
ಹೊರ್ಮುಜ್ ಜಲಸಂಧಿಯ ಪಶ್ಚಿಮದಲ್ಲಿ 24 ಮತ್ತು ಪೂರ್ವದಲ್ಲಿ ನಾಲ್ಕು ಸೇರಿದಂತೆ ಭಾರತದ ಧ್ವಜ ಹೊಂದಿರುವ ಒಟ್ಟು 28 ಹಡಗುಗಳು ಸಿಲುಕಿಕೊಂಡಿವೆ ವಿದೇಶಾಂಗ ಖಾತೆ ಮೂಲಗಳು ಹೇಳಿವೆ. ಹೊರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಸಾಗುವ ಎಲ್ಲ ಹಡಗುಗಳ ಸುಗಮ ಸಂಚಾರಕ್ಕೆ ಇರಾನ್ ಅನುಮತಿ ನೀಡಲಿದೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಶುಕ್ರವಾರ ದೃಢಪಡಿಸಿದ್ದಾರೆ.
ಹೊರ್ಮುಜ್ ಜಲಸಂಧಿಯ ಎರಡೂ ಬದಿಗಳಲ್ಲಿ ಬೀಡುಬಿಟ್ಟಿರುವ ಭಾರತದ 28 ವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ಮಾತುಕತೆ ನಡೆಸಿದರು.ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದಾಗಿನಿಂದ ಉಭಯ ನಾಯಕರ ನಡುವೆ ನಡೆದ ನಾಲ್ಕನೇ ಸುತ್ತಿನ ಮಾತುಕತೆ ಇದಾಗಿದೆ.










