ಮಳೆಯಾಗುವಾ.. ಮುಸ್ಸಂಜೆ ವೇಳೆಗೆ…
ಒಲವಾಗುವಾ…ಚಿತ್ತಾರ ಮೂಡಿದೆ..
ಶುರುವಾಗುವಾ..ಈ ಪ್ರೇಮ ಶಾಲೆಗೆ.. ಜೊತೆಯಾಗುವಾ ಸಂಗಾತಿ ಅನ್ನಿಸಿದೆ….
ಕಿವಿಗೆ ಇಂಪಾಗುವ ಮನಕ್ಕೆ ಮುದ ನೀಡುವ ಹೀಗೊಂದು ಹಾಡು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತಿದೆ…
ಹೌದು ಇದು ಮೊನ್ನೆ ತಾನೆ ಬಿಡುಗಡೆಯಾದ ‘ಲವ್ ಪ್ರಂ ರಾಯಚೂರು’ ಎಂಬ ಮ್ಯೂಸಿಕ್ ಆಲ್ಬಂನ ಹಾಡು. ಯುವಕರ ತಂಡ ನಿರ್ಮಿಸಿದ ಈ

ಆಲ್ಬಂ ಯುವಜನರ ಹೃದಯ ಗೆದ್ದು ಮುನ್ನಡೆದಿದೆ. ಬಾಸ್ ಮೀಡಿಯಾ ನಿರ್ಮಾಣದಲ್ಲಿ ಆದಿಶಕ್ತಿ ಫಿಲ್ಮ್ಸ್ ಅರ್ಪಿಸುವ ‘ಲವ್ ಪ್ರಂ ರಾಯಚೂರು’ ಆಲ್ಬಂನ ಸುಂದರ ಹಾಡು ಆಕರ್ಷಕ ಲೋಕೇಷನ್‌ನಲ್ಲಿ ಚಿತ್ರೀಕರಿಸುವ ಮೂಲಕ ಮನ ಗೆದ್ದಿದೆ. ಒಂದು ಹಾಡು ಒಂದು ಸುಂದರ ಪ್ರೇಮ ಕಥೆ ಹೇಳುತ್ತದೆ. ಕಥಾ ನಾಯಕ ಒಬ್ಬ ಪೊಟೋಗ್ರಾಫರ್. ನಾಯಕಿ ಒಂದು ಪೊಟೋ ಶೂಟ್‌ಗಾಗಿ ನಾಯಕನಿಗೆ ಕರೆ ಮಾಡುತ್ತಾರೆ.ಸುಂದರ ಪರಿಸರದಲ್ಲಿ ಪೊಟೋ ಶೂಟ್ ನಡೆಸುವಾಗ ಕ್ಯಾಮೆರಾ ಕಣ್ಣಿನಲ್ಲಿ ನೋಡುವಾಗ ನಾಯಕನಿಗೆ ನಾಯಕಿಯ ಮೇಲೆ ಪ್ರೇಮ ಉಂಟಾಗುತ್ತದೆ.
ಬಳಿಕ ಆತನ ಮನಸ್ಸಿನ ಪ್ರೇಮ ಲೋಕ ಸುಂದರವಾದ ಹಾಡಾಗಿ ತೆರೆದುಕೊಳ್ಳುತ್ತದೆ. ಕಡಲು,ಕಡಲ ಕಿನಾರೆ, ಹಿನ್ನೀರು, ಸುಂದರ ಹಸಿರು ಪರಿಸರವು ಹಾಡಿನ ಮೋಡಿಗೆ ಅದ್ಭುತ ಹಿನ್ನಲೆ ಒದಗಿಸಿದೆ. ಸಾರ್ ಪೊಟೋ ಶೂಟ್ ಮುಗಿಯಿತು ಎಂದು ಸಹಾಯಕ ನೆನಪಿಸುವಾಗ ಹೀರೋ ತನ್ನ ಪ್ರೇಮ ಲೋಕದಿಂದ ಹೊರ ಬರುತ್ತಾನೆ.. ಅಲ್ಲಿಗೆ ಆಲ್ಬಂ ಸಾಂಗ್ ಕೊನೆಗೊಳ್ಳುತ್ತದೆ. ಈರೇಶ್ ನಾಯಕ್ ಹಾಗು ಪವಿತ್ರ ಅಂಚನ್ ಹಾಡಿನ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಹನುಮೇಶ್ ಮತ್ತು ಶೇಖರ್ ಕೂಡ ಪಾತ್ರಧಾರಿಗಳಾಗಿದ್ದಾರೆ.

ಕಿರಣ್ ಕುಮಾರ್ ಆಲ್ಬಂ ನಿರ್ದೇಶಿಸಿದ್ದಾರೆ. ಚಂದನ್ ಆಚಾರ್ಯ ಸಂಗೀತ ನಿರ್ದೇಶಿಸಿ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.ಮಿಥುನ್ ಯಾದವ್ ಕ್ಯಾಮರಾದಲ್ಲಿ ಸಹಕರಿಸಿದ್ದಾರೆ. ಗುರುರಾಜ್ ಪದ್ಮಶಾಲಿ, ವರ್ಜ ರಿಯಲ್‌ಟೈಸ್, ಕ್ಯೂಬ್ ಕ್ರಿಯೇಟಿವ್ ಆಲ್ಬಂ ಸಾಂಗ್‌ನ ನಿರ್ಮಾಣದಲ್ಲಿ ಸಹಕರಿಸಿದ್ದಾರೆ. ಒಟ್ಟಿನಲ್ಲಿ ಹಾಡು, ಸಂಗೀತ, ಕ್ಯಾಮೆರಾ, ಎಡಿಟಿಂಗ್, ಲೊಕೇಷನ್ ಉತ್ತಮವಾಗಿ ಮೂಡಿ ಬಂದಿದೆ. ರಾಯಚೂರಿನಲ್ಲಿ ಅರಳುವ ಒಂದು ಪ್ರೇಮ ಕಾವ್ಯವನ್ನು ಆಲ್ಬಂ ಮೂಲಕ ಪ್ರಸ್ತುತ ಪಡಿಸುವ ಪ್ರಯತ್ನ ನಡೆಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತಿದೆ. ಲವ್ ಪ್ರಂ ರಾಯಚೂರು ಆಲ್ಬಂ ಸಾಂಗ್ ಯೂಟ್ಯೂಬ್ ಮೂಲಕ ಅ.24 ರಂದು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ಕೇವಲ 2-3 ದಿನದಲ್ಲಿ ಸಾವಿರಾರು ಮಂದಿ ಹಾಡನ್ನು ವೀಕ್ಷಿಸಿದ್ದಾರೆ ಎನ್ನುತ್ತಾರೆ ಬಾಸ್ ಮೀಡಿಯಾ ಕ್ರಿಯೇಷನ್‌ನ ದೇವಿಪ್ರಸಾದ್.

