ಸುಳ್ಯ: ಮೆಸ್ಕಾಂನ ಸುಳ್ಯ ಹಾಗು ಸುಬ್ರಹ್ಮಣ್ಯ ಉಪ ವಿಭಾಗದಲ್ಲಿ ಹಲವು ಮಂದಿ ಸಹಾಯಕ ಲೈನ್ ಮ್ಯಾನ್ಗಳಿಗೆ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ. ಇದರಿಂದ ಮೆಸ್ಕಾಂನ ವಿವಿಧ ಕಡೆಗಳಲ್ಲಿ ಲೈನ್ ಮ್ಯಾನ್ಗಳ ಕೊರತೆ ಕಾಡುವ ಸಾಧ್ಯತೆ ಕಂಡು ಬಂದಿದೆ. ಆದುದರಿಂದ ವರ್ಗಾವಣೆಯಿಂದ ತೆರವಾಗುವ ಹುದ್ದೆಗೆ ಕೂಡಲೇ ಬದಲಿ ನೇಮಕಾತಿ ಮಾಡಬೇಕು. ಹೊಸ ನೇಮಕಾತಿ ಆದ ಬಳಿಕವಷ್ಟೇ ವರ್ಗಾವಣೆ
ಆದವರನ್ನು ರಿಲೀವ್ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದಿದೆ. ಲೈನ್ಮ್ಯಾನ್ಗಳ ವರ್ಗಾವಣೆಯಿಂದ ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜಿನ ನಿರ್ವಹಣೆಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗು ಬಿಜೆಪಿ ಮುಖಂಡ ವೆಂಕಟ್ ದಂಬೆಕೋಡಿ ಹೇಳಿದ್ದಾರೆ.ಲೈನ್ಮ್ಯಾನ್ಗಳು ವರ್ಗಾವಣೆ ಆಗುವುದಕ್ಕೆ ಆಕ್ಷೇಪಣೆ ಇಲ್ಲಾ. ಆದರೆ ವರ್ಗಾವಣೆ ಆದ ಹುದ್ದೆಯನ್ನು ಶೀಘ್ರ ಭರ್ತಿ ಮಾಡಬೇಕು, ಬದಲಿ ನೇಮಕ ಆದ ಬಳಿಕ ಮಾತ್ರ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೈನ್ಮ್ಯಾನ್ಗಳನ್ನು ಹುದ್ದೆಯಿಂದ ರಿಲೀವ್ ಮಾಡಬೇಕು ಎಂದು ದಂಬೆಕೋಡಿ ಒತ್ತಾಯಿಸಿದ್ದಾರೆ.

ಗುತ್ತಿಗಾರಿನಲ್ಲಿ ಮೂರು ಮಂದಿಗೆ ವರ್ಗಾವಣೆ ಆಗಿದೆ. ಇಲ್ಲಿ 16 ಮಂದಿ ಲೈನ್ಮ್ಯಾನ್ಗಳು ಬೇಕಾಗಿರುವಲ್ಲಿ 11 ಮಂದಿ ಮಾತ್ರ ಇದ್ದಾರೆ. ಅದರಲ್ಲಿ ಮೂರು ಮಂದಿ ವರ್ಗಾವಣೆ ಆಗಿದೆ. ಸುಬ್ರಹ್ಮಣ್ಯ ಉಪ ವಿಭಾಗದಲ್ಲಿ ಹಲವು ಮಂದಿಗೆ ವರ್ಗಾವಣೆ ಆಗುವ ಸಾಧ್ಯತೆಯೂ ಇದೆ. ಆದುದರಿಂದ ಕೂಡಲೇ ಬದಲಿ ನೇಮಕ ಮಾಡಬೇಕು. ಇಲ್ಲದಿದ್ದರೆ ಗ್ರಾಮೀಣ ಭಾಗದ ವಿದ್ಯುತ್ ಸರಬರಾಜು ನಿರ್ವಹಣೆಗೆ ಸಮಸ್ಯೆ ಎದುರಾಗುವ ಆತಂಕ ಇದೆ, ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಈ ವಿಷಯವನ್ನು ಸಚಿವ ಅಂಗಾರ ಹಾಗು ಇತರ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ ಎಂದು ದಂಬೆಕೋಡಿ ಹೇಳಿದ್ದಾರೆ.
ಮೆಸ್ಕಾಂ ಸುಳ್ಯ ಉಪವಿಭಾಗದಲ್ಲಿ 4 ಮಂದಿ ಲೈನ್ಮ್ಯಾನ್ಗಳಿಗೆ ವರ್ಗಾವಣೆ ಆದೇಶ ಆಗಿದೆ. ಆದರೆ ಯಾರನ್ನೂ ರಿಲೀವ್ ಮಾಡಿಲ್ಲ ಎಂದು ಸುಳ್ಯ ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ.
ಜಾಲ್ಸೂರು, ಬೆಳ್ಳಾರೆ, ಸುಳ್ಯ, ಅರಂತೋಡು ಸೇರಿ ಸುಳ್ಯ ಉಪವಿಭಾಗದಲ್ಲಿ 80 ಮಂದಿ ಲೈನ್ಮ್ಯಾನ್ ಹುದ್ದೆ ಇದೆ. ಆದರೆ 60 ಮಂದಿ ಮಾತ್ರ ಇದ್ದಾರೆ.
ಗುತ್ತಿಗಾರು ಸಬ್ ಸ್ಟೇಷನ್ ಎಲ್ಲಾ ಫೀಡರ್ ಚಾಲೂ ಮಾಡಿ:
ಗುತ್ತಿಗಾರು ಸಬ್ಸ್ಟೇಷನ್ ಉದ್ಘಾಟನೆಯಾಗಿ ಒಂದೂವರೆ ವರ್ಷ ಆದರೂ ಎಲ್ಲಾ ಫೀಡರ್ಗಳು ಇನ್ನೂ ಚಾಲೂ ಆಗಿಲ್ಲ. ಆದುದರಿಂದ ಗುತ್ತಿಗಾರು ಸಬ್ ಸ್ಟೇಷನ್ನ ಎಲ್ಲಾ ಫೀಡರ್ಗಳು ಕೂಡಲೇ ಕಾರ್ಯಾಚರಿಸಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗಬೇಕು ಎಂದು ವೆಂಕಟ್ ದಂಬೆಕೋಡಿ ಆಗ್ರಹಿಸಿದ್ದಾರೆ.