ಸುಳ್ಯ: ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸರಿಯಾದ ಮಾರ್ಗದರ್ಶನ, ತರಬೇತಿ ಅತೀ ಅಗತ್ಯ. ನಾವು ಪಡೆಯುವ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮಾರ್ಗದರ್ಶನ ಹಾಗು ತರಬೇತಿ ಬೇಕಾಗಿದೆ ಎಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ವತಿಯಿಂದ ಸುಳ್ಯ ಶಾಖಾ
ಗ್ರಂಥಾಲಯ ಕಟ್ಟಡದಲ್ಲಿ ನಿರ್ಮಿಸಿರುವ ಜಿಲ್ಲೆಯ ಪ್ರಥಮ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾವು ಕಲಿತ ವಿದ್ಯೆ ಫಲಪ್ರದವಾಗಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗಿ ಉತ್ತಮ ಉದ್ಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಕೇಳುವ ತಾಳ್ಮೆ, ಕಲಿಯುವ ಇಚ್ಛಾಶಕ್ತಿ ಬೇಕು. ಯುವಕ ಯುವತಿಯರು ಸ್ಪರ್ಧಾತ್ಮಕವಾಗಿ ಪರೀಕ್ಷೆಯನ್ನು ಎದುರಿಸಲು ಬೇಕಾದ ತರಬೇತಿಗೆ ಅವಕಾಶ ಮಾಡಿಕೊಡುವ ಉದ್ಧೇಶದಿಂದ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದು ಅವರು ಹೇಳಿದರು. ಭೌಗೋಳಿಕ ವ್ಯತ್ಯಾಸಕ್ಕನುಸಾರವಾಗಿ ಅಭಿವೃದ್ಧಿಯ ವೇಗದಲ್ಲಿಯೂ ವ್ಯತ್ಯಾಸ ಇರುತ್ತದೆ ಎಂದ ಅವರು ಸುಳ್ಯದ ಬೆಳವಣಿಗೆಗೆ ಪ್ರತಿಯೊಬ್ಬರ ಕೊಡುಗೆ ಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ
‘ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು, ಗುರಿಗೆ ಸರಿಯಾದ ದಾರಿ ಬೇಕು ಎಂದರು. ಸುಳ್ಯದಲ್ಲಿ ತಿಂಗಳಲ್ಲಿ ಎರಡು ಬಾರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ ಮಾತನಾಡಿ ‘ಮಕ್ಕಳಿಗೆ ಜ್ಞಾನದ ಮತ್ತು ಹಣದ ಮೌಲ್ಯದ ಬೆಲೆ ತಿಳಿಸಿಕೊಡಬೇಕು.ಮಕ್ಕಳು ಕಷ್ಟವನ್ನು ಅರ್ಥೈಸಿಕೊಂಡು ಬೆಳೆದರೆ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಓದಿನ್ನು ತಪಸ್ಸಾಗಿಸಬೇಕು ಆಗ ಜ್ಞಾನವು ಬೆಳೆಯುತ್ತದೆ ಎಂದು ಅವರು ಹೇಳಿದರು.
ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು.ತಹಶೀಲ್ದಾರ್ ಅನಿತಾ ಲಕ್ಷ್ಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ್ ಕುರುಂಜಿ, ಹಿರಿಯ ಸಾಹಿತಿ ಡಾ. ಪ್ರಭಾಕರ್ ಶಿಶಿಲ ಮುಖ್ಯ ಅತಿಥಿಯಾಗಿದ್ದರು.ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ ಸ್ವಾಗತಿಸಿದರು. ಪ್ರಣಿತಪ್ರಿಯಾ ಮೊಂತೇರೋ ವಂದಿಸಿದರು. ಅನುಷಾ ಕಾರ್ಯಕ್ರಮ ನಿರೂಪಿಸಿದರು.