ಬೆಂಗಳೂರು: ವಿಧಾನ ಪರಿಷತ್ತಿಗೆ ಸದ್ಯದಲ್ಲೇ ಖಾಲಿ ಆಗುತ್ತಿರುವ ಆರು ಸ್ಥಾನಗಳಿಗೆ ಭಾರತ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ.ಮೂರು ಪದವೀಧರರ ಕ್ಷೇತ್ರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳಿಗೆ ಜೂ.3 ರಂದು ಚುನಾವಣೆ ನಡೆಯಲಿದೆ. ಈಶಾನ್ಯ
ಪದವೀಧರರ ಕ್ಷೇತ್ರ ಡಾ.ಚಂದ್ರಶೇಖರ ಬಿ.ಪಾಟೀಲ್, ನೈರುತ್ಯ ಪದವೀಧರರ ಕ್ಷೇತ್ರ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರರ ಕ್ಷೇತ್ರ ಎ. ದೇವೇಗೌಡ,
ಆಗ್ನೇಯ ಶಿಕ್ಷಕರ ಕ್ಷೇತ್ರ ವೈ.ಎ.ನಾರಾಯಣಸ್ವಾಮಿ, ನೈರುತ್ಯ ಶಿಕ್ಷಕರ ಕ್ಷೇತ್ರ ಎಸ್.ಎಲ್.ಭೋಜೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿತಿಬ್ಬೇಗೌಡ ಅವರ ಅಧಿಕಾರಾವಧಿ ಜೂ.21ಕ್ಕೆ ಮುಕ್ತಾಯಗೊಳ್ಳಲಿದೆ.
ಹಿನ್ನೆಲೆಯಲ್ಲಿ ಮೇಲ್ಕಂಡ ವಿಧಾನ ಪರಿಷತ್ತಿನ ಆರು ಕ್ಷೇತ್ರಗಳಿಗೆ ವೇಳಾಪಟ್ಟಿ ಪ್ರಕಟಿಸಿದ್ದು, 2024ರ ಮೇ 9ಕ್ಕೆ ಚುನಾವಣಾ ಅಧಿಸೂಚನೆ ಪ್ರಕಟಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮೇ 17ಕ್ಕೆ ನಾಮಪತ್ರ ಪರಿಶೀಲನೆ, ಮೇ 20ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಜೂನ್ 3ರ ಬೆಳಗ್ಗೆ 8ಗಂಟೆಯಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಜೂನ್ 6ಕ್ಕೆ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ. ಜೂನ್ 12ರ ಒಳಗಾಗಿ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ ತಿಳಿಸಿದೆ.