ಸುಳ್ಯ:ನಿನ್ನೆ ತಾನೆ ಅಗಲಿದ ಹಿರಿಯ ನಟಿ ಲೀಲಾವತಿ ಅವರು ಸುಳ್ಯಕ್ಕೆ ಭೇಟಿ ನೀಡಿದ್ದರು. ತಮ್ಮ ಪುತ್ರ ವಿನೋದ್ ರಾಜ್ ಜೊತೆ ಲೀಲಾವತಿ ಅವರು ಸುಳ್ಯಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭವನ್ನು ನೆನಪಿಸುತ್ತಾರೆ ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿ.
2008ರಲ್ಲಿ ಚಲನಚಿತ್ರ ನಟಿ ಲೀಲಾವತಿ ಅವರು ಸುಳ್ಯಕ್ಕೆ ಬಂದ ಸಂದರ್ಭದಲ್ಲಿ.ನಾನು ಭೇಟಿಯಾಗಿ ಮಾತನಾಡಿದ್ದೆ. ಗಂಗಾಧರ ಮಟ್ಟಿ.. ಪತ್ರಕರ್ತ ಎಂದು ಪರಿಚಯಿಸಿದಾಗ ಮಟ್ಟಿ ಎಂದರೆ ಉಡುಪಿ ಸಮೀಪದ
ಪ್ರಸಿದ್ದ ಮಟ್ಟು ಗುಳ್ಳ ಬೆಳೆಯುವ ಊರೇ..? ಎಂದು ಸ್ವಲ್ಪ ಆಶ್ಚರ್ಯದ ಮುಗುಳು ನಗುವಿನೊಂದಿಗೆ ಮಾತನಾಡಿಸಿದ್ದರು. ನಿಮ್ಮ ಊರಿಗೆ ಹೋಗಿ ಮಟ್ಟಿ ಗುಳ್ಳದ ಬೀಜ ತಂದು ನಮ್ಮ ತೋಟದಲ್ಲಿ ಬೆಳೆಸಿದ್ದೆ. ಮಟ್ಟಿಗುಳ್ಳ ಬೆಳೆಯನ್ನು ಪರಿಚಯಿಸಲು ಹಾಗೂ ಅದರ ಬೀಜ ಸಂಗ್ರಹಕ್ಕಾಗಿಯೇ ನಿಮ್ಮ ಊರನ್ನು ಹುಡುಕಿಕೊಂಡು ಹೋಗಿದ್ದೆ. ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದ ಗುಳ್ಳವನ್ನು ನಮ್ಮ ತೋಟದಲ್ಲಿ ಬೆಳೆಸಿ ಅದರ ರುಚಿಯನ್ನು ಸವಿದಿದ್ದೇನೆ ಎಂದು ಲೀಲಾವತಿಯವರು ಹೇಳಿದ್ದರು. ಮಟ್ಟಿಗುಳ್ಳದ ಎಷ್ಟೋಂದು ರುಚಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಳ್ಳಿಗಳಿಗೆ ಭೇಟಿ ನೀಡಿ ವಿಶೇಷ ಗಿಡಗಳನ್ನು ಸಂಗ್ರಹಿಸಿ ಅದನ್ನು ತೋಟದಲ್ಲಿ ಬೆಳೆಸುವ ಹವ್ಯಾಸ ಹೊಂದಿದ್ದೇನೆ ಎಂದು ಲೀಲಾವತಿ ಅವರು ಹೇಳಿದ್ದರು.

ಗುಳ್ಳದಿಂದ ಮಾಡಬಹುದಾದ ಖಾದ್ಯಗಳ ಬಗ್ಗೆ ಪತ್ನಿ ಚಿತ್ರಾ ಮಟ್ಟಿ ಲೀಲಾವತಿ ಅವರಿಗೆ ಮಾಹಿತಿ ನೀಡಿದಳು. ಮತ್ತೆ ಅವರಿಬ್ಬರೂ ಆತ್ಮೀಯರಾಗಿ ಗಂಟೆಗೂ ಮಿಕ್ಕಿ ಹರಟೆ ಹೊಡೆದರು. ಮಟ್ಟಿಗುಳ್ಳದಿಂದ ಮಾಡಬಹುದಾದ ಖಾದ್ಯಗಳ ಬಗ್ಗೆ ಬರೆದು ಕೊಡುವಂತೆಯೂ ತಿಳಿಸಿದ್ದರು ಎಂದು ಮಟ್ಟಿಯವರು ತಮ್ಮ ನೆನಪಿನ ಬುತ್ತಿ ಬಿಚ್ಚಿದರು.
ಮೈಸೂರಿಗೆ ತೆರಳುವ ಸಂದರ್ಭದಲ್ಲಿ ಲೀಲಾವತಿ ಅವರು ವಿಶ್ರಾಂತಿ ಪಡೆಯಲು ಸುಳ್ಯದ ಖಾಸಗೀ ಹೋಟೆಲ್ನಲ್ಲಿ ತಂಗಿದ್ದರು. ಆ ಸಂದರ್ಭದಲ್ಲಿ ತಾನು ಮತ್ತು ಪತ್ನಿ ಚಿತ್ರಾ ಮಟ್ಟಿ ಭೇಟಿಯಾಗಿದ್ದವು. ಪುತ್ರ ವಿನೋದ್ರಾಜ್ ಜೊತೆಗಿದ್ದರು. ಆ ಮಹಾನ್ ಕಲಾವಿದೆಯವರ ಜೊತೆ ಕಳೆದ ಸಮಯ ಅಲ್ಪವಾದರೂ ಆ ನೆನಪುಗಳು ಅವಿಸ್ಮರಣೀಯ ಎಂದು ಗಂಗಾಧರ ಮಟ್ಟಿಯವರು ನೆನಪಿಸಿ ಕೊಂಡರು









