ಸುಳ್ಯ:ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 200ಕ್ಕೂ ಹೆಚ್ಚು ಮಹಿಳೆಯರಿಗೆ ಲಲಿತ ಸಹಸ್ರನಾಮ ಪಾರಾಯಣ ತರಬೇತಿ ನೀಡಲಾಗಿದೆ. ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಕಾರ್ಯದರ್ಶಿ ಶ್ರೀದೇವಿ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಅಜ್ಜಾವರ ಹಾಗೂ ಮಂಡೆಕೋಲು ಗ್ರಾಮದ ಸುಮಾರು 200 ಕ್ಕೂ ಹೆಚ್ಚು ಮಂದಿಗೆ ಶಾಸ್ತ್ರೋಕ್ತವಾಗಿ ಲಲಿತ ಸಹಸ್ರನಾಮ ಪಾರಾಯಣ ಕಲಿಸಿ ಕೊಡಲಾಯಿತು. ಸುಮಾರು ಒಂದು ತಿಂಗಳಿನಿಂದ
ಈ ರೀತಿ ಲಲಿತಾ ಸಹಸ್ರನಾಮ ಪಾರಾಯಣ ಅಭ್ಯಾಸ ನಡೆಸಲಾಯಿತು.ಸುಳ್ಯ ದಸರಾ ಉತ್ಸವದ ಅಂಗವಾಗಿ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಅ.4ರಂದು ಸಂಜೆ
ಶಾರದಾಂಬಾ ವೇದಿಕೆಯಲ್ಲಿ ಚಂಡಿಕಾ ಮಹಾಯಾಗ ನಡೆಯಲಿದೆ. ಈ ಚಂಡಿಕಾ ಯಾಗದಲ್ಲಿ ತರಬೇತಿ ಪಡೆದ ಮಹಿಳೆಯರು ಲಲಿತಾ ಸಹಸ್ರನಾಮ ಪಾರಾಯಣ ಮಾಡಲಿದ್ದಾರೆ.

29ನೇ ವರ್ಷ ಕೇಶವ ಕೃಪಾ ಸಹಯೋಗದಲ್ಲಿ ದಸರಾ ಉತ್ಸವ ಸಂದರ್ಭದಲ್ಲಿ ಚಂಡಿಕಾ ಯಾಗ ನಡೆಯುತಿದೆ.ಸಾಮೂಹಿಕ ಪ್ರಾರ್ಥನೆ ದೀಪಾರಾಧನೆ, ಸ್ವಸ್ತಿ ಪುಣ್ಯಾಹ ಅಗ್ನಿ ಪ್ರತಿಷ್ಠೆಯ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ಹಾಗೂ ಮಾತೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ ಎಂದು ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ.












