ಸುಳ್ಯ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾ.11ರಂದು ನವದೆಹಲಿಯಲ್ಲಿ ನಡೆಸುವ ಲಖಪತಿ ದೀದಿಗಳೊಂದಿಗೆ ನಡೆಸುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಆಯ್ಕೆಯಾಗಿದ್ದಾರೆ. ಎನ್.ಆರ್.ಎಲ್.ಎಂ, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ನವದೆಹಲಿ ವತಿಯಿಂದ ಪ್ರಧಾನ ಮಂತ್ರಿಗಳ ‘ಲಖಪತಿ ದೀದಿ’ ಯವರುಗಳೊಂದಿಗೆ
ಸಂವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಕರ್ನಾಟಕ ರಾಜ್ಯದಿಂದ 22 ‘ಲಖಪತಿ ದೀದಿ’ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ.ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮೋಹಿನಿ ಅವರು ಆಯ್ಕೆಯಾಗಿದ್ದಾರೆ.
ವಾರ್ಷಿಕ ರೂ.1.00 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿರುವ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರನ್ನು ಸಂವಾದಕ್ಕೆ ಆಯ್ಕೆ ಮಾಡಲಾಗಿದೆ.ಮಾ.10ರಂದು ಬೆಂಗಳೂರಿನಿಂದ ದೆಹಲಿಗೆ ತೆರಳಿ ಮಾ.11ರಂದು ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದ ವಿಶ್ವನಾಥ ಪಿ.ಆರ್.ಅವರ ಪತ್ನಿ ಮೋಹಿನಿ.
‘ಈ ಅವಕಾಶ ಅನಿರೀಕ್ಷಿತ ಮತ್ತು ಅತ್ಯಂತ ಸಂತಸ ಆಗಿದೆ ಎಂದು ಮೋಹಿನಿ ವಿಶ್ವನಾಥ್ ಅವರು ಪ್ರತಿಕ್ರಿಯಿಸಿದ್ದಾರೆ. ಸಂಜೀವಿನಿ ಒಕ್ಕೂಟ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಕೃಷಿ, ತೋಟಗಾರಿಕಾ ಇಲಾಖೆ, ರೈತ ಉತ್ಪಾದಕರ ಸಂಸ್ಥೆ ಹಾಗೂ ಎಲ್ಲಾ ಕೃಷಿಕರ ಸಹಕಾರದಿಂದ ಈ ಅವಕಾಶ ಸಿಕ್ಕಿದೆ ಎಂದು ಮೋಹಿನಿ ‘ಸುಳ್ಯ ಮಿರರ್’ ಜೊತೆ ಹೇಳಿದ್ದಾರೆ.














