ಚಿತ್ರ-ವರದಿ:ದಯಾನಂದ ಕಡಬ
ಸುಳ್ಯ: ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಎರಡನೇ ದಿನವಾದ ಶನಿವಾರ ಮಹಿಳಾ ವಿಭಾಗದ ಕಬಡ್ಡಿ ಪಂದ್ಯ ನಡೆಯಿತು. ಮೊದಲ ಪಂದ್ಯದಲ್ಲಿ ಟಿಎಂಸಿ ಥಾಣೆ ಹಾಗೂ ಕನ್ಯಾಕುಮಾರಿ ತಮಿಳುನಾಡು ತಂಡಗಳ ನಡುವೆ ನಡೆಯಿತು. ಟಿಎಂಸಿ ಥಾಣೆ ತಂಡ ಕನ್ಯಾಕುಮಾರಿ ತಂಡದ ವಿರುದ್ಧ ಸುಲಭ ಜಯ(56-11) ಸಾಧಿಸಿತು. ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದ

ಟಿಎಂಸಿ ಥಾಣೆ ತಂಡದ ದಾಳಿಗೆ ಕನ್ಯಾಕುಮಾರಿ ತಮಿಳುನಾಡು ತಂಡವನ್ನು ಮೊದಲ ಅರ್ಧ ವಿರಾಮದ ವೇಳೆಗೆ ಮೂರು ಬಾರಿ ಅಂಕಣ ಖಾಲಿ ಮಾಡಿತು. ಈ ವೇಳೆಗೆ 31-6 ಅಂಕಗಳ ಭಾರೀ ಮುನ್ನಡೆಯನ್ನೂ ಸಾಧಿಸಿತು. ಎರಡನೇ ಅವಧಿಯಲ್ಲಿಯೂ ಥಾಣೆ ತಂಡದ ದಾಳಿಗೆ ನಲುಗಿದ ಕನ್ಯಾಕುಮಾರಿ ತಂಡ ಮತ್ತೆ ಒಂದು ಬಾರಿ ಅಂಕಣ ಖಾಲಿ ಮಾಡುವ ಮೂಲಕ ಪಂದ್ಯಾಟದಲ್ಲಿ ಒಟ್ಟು ನಾಲ್ಕು ಬಾರಿ ಅಂಕಣ ಖಾಲಿ ಮಾಡಿಕೊಂಡಿತು.ಅಂತಿಮವಾಗಿ ಟಿಎಂಸಿ ಥಾಣೆ ತಂಡ 56-11 ಅಂಕಗಳಿಂದ ಕನ್ಯಾಕುಮಾರಿ ತಮಿಳುನಾಡು ತಂಡದ ಎದುರು ಜಯ ಗಳಿಸಿತು.ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ
ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.







