ಸುಳ್ಯ: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿರಿಸಿ
ಏ.1ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮುಖಂಡರು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ಜೀವರತ್ನ ಮಾತನಾಡಿ’ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ
ಸುಳ್ಯ-ಐವರ್ನಾಡು- ಸುಬ್ರಹ್ಮಣ್ಯ ವಿಭಾಗದ ರಬ್ಬರ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿ ಅನಿರ್ಧಿಷ್ಟಾವಧಿ ಪ್ರತಿಭಟನಾ ಹೋರಾಟ ಮತ್ತು ಧರಣಿ ಸತ್ಯಾಗ್ರವನ್ನು ನಡೆಸಲು ಕಾರ್ಮಿಕ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ. ನಿಗಮದಲ್ಲಿ ಶೇ.60ರಷ್ಟು ನಿರಂತರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ನಿರಂತರ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಮತ್ತು ನಿರಂತರ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಬೇಕು, ಕಾರ್ಮಿಕರ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರಿತ ಕೆಲಸವನ್ನು ನೀಡಬೇಕು. ಮೇಸ್ತ್ರಿ ಕಾರ್ಮಿಕರ ನೇಮಕಾತಿ ಮಾಡಬೇಕು, ಎಲ್ಲಾ ಕಾರ್ಮಿಕರಿಗೆ ಇಎಸ್ಐ ಸೌಲಭ್ಯವನ್ನು ನೀಡಬೇಕು ಮತ್ತಿತರ ಬೇಡಿಕೆಗಳನ್ನು ಮುಂದಿರಿಸಿ ಸುಳ್ಯದ ವಿಭಾಗೀಯ ವ್ಯವಸ್ಥಾಪಕರ ಕಛೇರಿಯ ಮುಂಭಾಗದಲ್ಲಿ
ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ವಿವರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ಲಾಂಟೇಷನ್ & ಇಂಡಸ್ಟ್ರೀಯಲ್ ವರ್ಕರ್ಸ್ ಟ್ರೇಡ್ ಯೂನಿಯನ್,ಜನರಲ್ ಎಂಪ್ಲಾಯಿಸ್ ಯೂನಿಯನ್, ತೋಟ ತೊಳಿಲಾಲರ್ ಸಂಘ,ಕರ್ನಾಟಕ ತೋಟ ಮಜ್ದೂರ್ ಸಂಘ , ಕೆಎಫ್ಡಿ.ಸಿ. ಲೇಬರರ್ಸ್ ಯೂನಿಯನ್ ಕಾರ್ಮಿಕ ಸಂಘಟನೆಗಳು ಭಾಗವಹಿಸಲಿವೆ ಎಂದು ಜೀವರತ್ನ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರಾದ ಶಿವಕುಮಾರ್ ಕಂದಡ್ಕ, ಸುಂದರಲಿಂಗಂ, ಅರುಣಾಚಲಂ,ಶರತ್ ಕುಮಾರ್, ಶಶಿಕುಮಾರ್, ಕಾರ್ತಿಕ್, ಕ್ರೂಸ್ ನಾಗಪಟ್ಟಣ ಉಪಸ್ಥಿತರಿದ್ದರು.














