ಸುಳ್ಯ:ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಎರಡು ದಿನಗಳ ಅದ್ದೂರಿ ‘ಕೆವಿಜಿ ಸುಳ್ಯ ಹಬ್ಬ’ ಡಿ.25 ಮತ್ತು 26 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ನಡೆಯಲಿಸೆ ಎಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಕೆ.ಟಿ.ವಿಶ್ವನಾಥ್ ‘ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಭ್ರಮದೊಂದಿಗೆ ನಡೆಯುವ ಸುಳ್ಯ ಹಬ್ಬದಲ್ಲಿ
ಕೆವಿಜಿ ಸಂಸ್ಮರಣೆ, ಸಾಧನಾಶ್ರೀ ಪ್ರಶಸ್ತಿ ಪ್ರದಾನ, ಯುವ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು. ಡಿ.25ರಂದು ಪೂ.9ರಿಂದ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟು ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ. ಶ್ರೀ ಚೆನ್ನಕೇಶವ ದೇಗುಲದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಉದ್ಘಾಟಿಸುವರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಗೌರವ ಉಪಸ್ಥಿತಿಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ ವಹಿಸಲಿದ್ದಾರೆ.

ಸಂಜೆ 6 ರಿಂದ ಸಾಂಸ್ಕೃತಿಕ ಸಂಭ್ರಮದ ಅಂಗವಾಗಿ ಸಂಗೀತ ರಸಮಂಜರಿ ನಡೆಯಲಿದೆ. ಸಂಜೆ 7 ಗಂಟೆಯಿಂದ ಯುವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ ವಹಿಸಲಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ.ಪಿ.ಎಲ್ ಧರ್ಮ ಯುವ ಸಾಧಕರನ್ನು ಅಭಿನಂದಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ , ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಭಾಗವಹಿಸಲಿದ್ದಾರೆ.
ಯುವ ಸಾಧಕರಾದ ಮಯೂರ ಅಂಬೆಕಲ್ಲು (ಸಿನಿಮಾ ಕ್ಷೇತ್ರ) ರಮೇಶ್ ಮೆಟ್ಟಿನಡ್ಕ(ಸಾಂಸ್ಕೃತಿಕ ಕ್ಷೇತ್ರ), ಡಾ.ಕಿಶನ್ ರಾವ್(ವೈದ್ಯಕಿಯ ಕ್ಷೇತ್ರ),ಹರ್ಷಿತ್ ಪಡ್ರೆ (ಮಾಧ್ಯಮ ಕ್ಷೇತ್ರ),ಜಸ್ಮಿತಾ ಕೊಡೆಂಕಿರಿ(ಕ್ರೀಡಾ ಕ್ಷೇತ್ರ) ಇವರನ್ನು ಸನ್ಮಾನಿಸಿ ಅಭಿನಂದಿಸಲಾಗುವುದು. ರಾತ್ರಿ 8.30ರಿಂದ ಮನೋರಂಜನಾ ಕಾರ್ಯಕ್ರಮದಲ್ಲಿ ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು ಹಾಗೂ ರಂಗಮಯೂರಿ ಸುಳ್ಯ ಇವರಿಂದ ನೃತ್ಯ ವೈಭವ ನಡೆಯಲಿದೆ.
ಕೆವಿಜಿ ಸಾಧನಾಶ್ರೀ ಪ್ರಶಸ್ತಿ:
ಡಿ.26ರಂದು ಸಂಜೆ ಕೆವಿಜಿ ಸಂಸ್ಕರಣೆ ಹಾಗೂ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಿರಿಯರಾದ ಎಸ್.ಎಂ.ಬಾಪೂ ಸಾಹೇಬ್ ಮತ್ತು ಹಿರಿಯ ಪತ್ರಕರ್ತ ಡಾ.ಯು.ಪಿ ಶಿವಾನಂದ ಅವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ ಅಧ್ಯಕ್ಷ ಹಾಗೂ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ ಚಿದಾನಂದ ಅವರು ವಹಿಸಲಿದ್ದಾರೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಡಾ.ಸಿ ಸೋಮಶೇಖರ ಅವರು ಕೆವಿಜಿ ಸಂಸ್ಮರಣಾ ಭಾಷಣ ಮಾಡುವರು. ಮುಖ್ಯ ಅಥಿತಿಗಳಾಗಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಭಾಗವಹಿಸಲಿದ್ದಾರೆ.

ಡಿ.26ರಂದು ಬೆಳಿಗ್ಗೆ 9.30ಕ್ಕೆ ಕೆವಿಜಿ ಸುಳ್ಯ ಹಬ್ಬದ ಕಚೇರಿಯಲ್ಲಿ ಡಾ.ಕುರುಂಜಿ ವೆಂಕಟರಮಣ ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಕಾರ್ಯಕ್ರಮ ನಡೆಯಲಿದೆ. ಪೂ.10.30ಕ್ಕೆ ಕೆವಿಜೆ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಒಂದು ಲಕ್ಷ ರೂಪಾಯಿಗಳ ನಗದು ಸಹಾಯ ಧನದಲ್ಲಿ ನಿರ್ಮಾಣವಾದ ನೂತನ ಮನೆಯ ಹಸ್ತಾಂತರ ನಡೆಯಲಿದೆ. ಸಂಘದ ಸ್ಥಾಪಕಾಧ್ಯಕ್ಷ ಎನ್. ಜಯಪ್ರಕಾಶ್ ರೈ ಮನೆ ಹಸ್ತಾಂತರ ಮಾಡುವರು. ಅಥಿತಿಗಳಾಗಿ ರಾಮಚಂದ್ರ ಪೆಲ್ತಡ್ಕ ಉಪಸ್ಥಿತರಲಿದ್ದಾರೆ.ರಾತ್ರಿ ಗಂಟೆ 8:30 ರಿಂದ ಚಾ ಪರ್ಕ ಕಲಾವಿದರು ಕುಡ್ಲ ಅಭಿನಯಿಸುವ ‘ಪುದರ್ ದೀತಿಜಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ ಎಂದು ಕೆ.ಟಿ.ವಿಶ್ವನಾಥ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಕೋಶಾಧಿಕಾರಿ ಚಂದ್ರಾವತಿ ಬಡ್ಡಡ್ಕ, ಪದಾಧಿಕಾರಿಗಳಾದ ಪಿ.ಎಸ್ ಗಂಗಾಧರ, ಚಂದ್ರಶೇಖರ ಪೇರಾಲು, ಡಾ.ಎನ್.ಎ. ಜ್ಞಾನೇಶ್, ಪಿ.ಎಂ.ರಂಗನಾಥ್ ಉಪಸ್ಥಿತರಿದ್ದರು.













