ಸುಳ್ಯ:ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ
ಲಕ್ಷಾಂತರ ಮಂದಿಗೆ ಶಿಕ್ಷಣವನ್ನು ಧಾರೆಯೆರೆದವರು ಡಾ.ಕುರುಂಜಿ ವೆಂಕಟ್ರಮಣ ಗೌಡರು. ಶಿಕ್ಷಣದ ಮೂಲಕ ಸಮಾಜ ಸುಧಾರಣೆ ಮಾಡಿದ ಸಾಧಕರು ಅವರು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.
ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ
ವೇದಿಕೆಯಲ್ಲಿ ನಡೆಯುತ್ತಿರುವ ಕೆವಿಜಿ ಸುಳ್ಯ ಹಬ್ಬದಲ್ಲಿ ಯುವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಮಾತನಾಡಿ ‘ ಶಿಕ್ಷಣದ ಮೂಲಕ ಯುವ ಜನಾಂಗವವನ್ನು ಸುಶಿಕ್ಷಿತರನ್ನಾಗಿ ಮಾಡಿ ಸಮಾಜವನ್ನು ಕಟ್ಟಿದವರು ಡಾ.ಕುರುಂಜಿ ವೆಂಕಟ್ರಮಣ ಗೌಡರು ಎಂದು ಹೇಳಿದರು.
ಯುವ ಸಾಧಕರಾದ ಮಯೂರ ಅಂಬೆಕಲ್ಲು (ಸಿನಿಮಾ ಕ್ಷೇತ್ರ) ರಮೇಶ್ ಮೆಟ್ಟಿನಡ್ಕ(ಸಾಂಸ್ಕೃತಿಕ ಕ್ಷೇತ್ರ), ಡಾ.ಕಿಶನ್ ರಾವ್(ವೈದ್ಯಕಿಯ ಕ್ಷೇತ್ರ),ಹರ್ಷಿತ್ ಪಡ್ರೆ (ಮಾಧ್ಯಮ ಕ್ಷೇತ್ರ),ಜಸ್ಮಿತಾ ಕೊಡೆಂಕಿರಿ(ಕ್ರೀಡಾ ಕ್ಷೇತ್ರ) ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ನಿಕಟ ಪೂರ್ವ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಕೋಶಾಧಿಕಾರಿ ಚಂದ್ರಾವತಿ ಬಡ್ಡಡ್ಕ ವಂದಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಮನೋರಂಜನಾ ಕಾರ್ಯಕ್ರಮದಲ್ಲಿ ಸಂಜೆ ಸ್ಥಳೀಯ ಕಲಾವಿದರಿಂದ ಸಂಗೀತ ರಸಮಂಜರಿ, ರಾತ್ರಿ ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು ಹಾಗೂ ರಂಗಮಯೂರಿ ಸುಳ್ಯ ಇವರಿಂದ ನೃತ್ಯ ವೈಭವ ನಡೆಯಿತು.
















