ಸುಳ್ಯ: ಕುರುಂಜಿ ವೆಂಕಟರಮಣ ಗೌಡ ಪಾಲಿಟೆಕ್ನಿಕ್ನ 40ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.ಅಕಾಡೆಮಿ ಆಫ್ ಲಿಬರಲ್ಎಜುಕೇಶನ್ ಕಮಿಟಿ “ಬಿ” ಯ ನಿರ್ದೇಶಕ ಮೌರ್ಯ ಆರ್. ಕುರುಂಜಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಗೂ ಜೀವನಕ್ಕೂ ಸಾಮ್ಯತೆ ಇದೆ. ಕ್ರೀಡೆಯಲ್ಲಿ ಹೇಗೆ ಸೋಲು ಗೆಲುವುಗಳಿರುತ್ತವೋ ಹಾಗೆಯೇ
ಜೀವನದಲ್ಲಿಯೂ ಕೂಡ ಸೋಲು ಗೆಲುವುಗಳು ಬರುತ್ತವೆ. ಅವುಗಳನ್ನೆಲ್ಲ ಮೆಟ್ಟಿ ನಿಲ್ಲಬೇಕಾದರೆ ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಥರಾಗಿರಬೇಕು. ಆ ನಿಟ್ಟಿನಲ್ಲಿ ಕ್ರೀಡೆ ಅವಶ್ಯಕ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಎ.ಓ.ಎಲ್.ಇ ಕಮಿಟಿ “ಬಿ” ಯ ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಪ್ರಭುಲಿಂಗ ಡಿ.ಎಚ್ , ಪ್ರಜ್ಞಾ ಕೆ.ಆರ್, ಕ್ರೀಡಾ ಸಂಚಾಲಕರಾದ ಅಣ್ಣಪ್ಪ ಜಿ. ಕೆ, ಪ್ರಮೋದ್ ಬಿ.ಡಿ , ಕಚೇರಿ ಅಧೀಕ್ಷಕ ಶಿವರಾಮ ಕೇರ್ಪಳ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಎನ್ನೆಸ್ಸೆಸ್ ಬ್ಯಾಂಡ್ ಸೆಟ್ ನೊಂದಿಗೆ ಆಕರ್ಷಕ ಪಥಸಂಚಲನ ನಡೆಯಿತು. ವಿದ್ಯಾರ್ಥಿನಿ ಶರಣ್ಯ ಪ್ರಾರ್ಥಿಸಿದರು.ವಿದ್ಯಾರ್ಥಿ ಸಂಘದ ಪದಾಧಿಕಾರಿ ಮಹಮ್ಮದ್ ಮಸೂದ್ ಸ್ವಾಗತಿಸಿ, ವಿದ್ಯಾರ್ಥಿನಿ ಅರ್ಪಿತ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ಅಕ್ಷತಾ ಪ್ರಮಾಣ ವಚನ ಬೋಧಿಸಿದರು. ಎನ್.ಎಸ್. ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು.
ಕೆವಿಜಿ ಐಪಿಎಸ್ ನ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ರಾಜೇಶ್ ಕುಮಾರ್, ಪ್ರಶಾಂತ್ ಹಾಗೂ ಆಶಾ ಕ್ರೀಡಾಕೂಟವನ್ನು ನಡೆಸಿಕೊಟ್ಟರು.















