ಸುಳ್ಯ: ಶಿಕ್ಷಣದ ಮೂಲಕ ಸುಳ್ಯದಲ್ಲಿ ಪವಾಡ ಸೃಷ್ಠಿಸಿದವರು ಡಾ.ಕುರುಂಜಿ ವೆಂಕಟ್ರಮಣ ಗೌಡರು. ಡಾ.ಕೆವಿಜಿಯವರ ಬದುಕಿನ ಮತ್ತು ಸಾಧನೆಯ ಪ್ರೇರಣೆಯಿಂದ ಹಲವು ಮಂದಿ ಕುರುಂಜಿಯವರು ಹುಟ್ಟಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರರಾದ ರಾಜೇಂದ್ರ ಭಟ್ ಕಾರ್ಕಳ ಅಭಿಪ್ರಾಯಪಟ್ಟಿದ್ದಾರೆ.
ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 95ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಚೆನ್ನಕೇಶವ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ನಡೆಯುತ್ತಿರುವ ಕೆ.ವಿ.ಜಿ ‘ಸುಳ್ಯ ಹಬ್ಬ’ ಆಚರಣೆಯಲ್ಲಿ
ಡಿ.25ರಂದು ನಡೆದ ಯುವ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಯುವ ಸಾಧಕರನ್ನು ಅಭಿನಂದಿಸಿ ಅವರು ಮಾತನಾಡಿದರು. ಕೆವಿಜಿಯವರ ಕಾಳಜಿ, ಸಮರ್ಪಣಾ ಭಾವನೆ ಸುಳ್ಯವನ್ನು ಬೆಳೆಸಿತು. ಕೃಷಿ ಆದಾಯದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸುಳ್ಯವನ್ನು ಶಿಕ್ಷಣ ಕಾಶಿಯನ್ನಾಗಿ ಮಾಡಿದ ಸಾಧನೆ ಅವರದ್ದು, ಅದು ಅವರ ದೂರದೃಷ್ಠಿಯ ಫಲ. ಡಾ.ಕೆವಿಜಿಯವರನ್ನು ಪ್ರತಿಯೊಬ್ಬರೂ ಪ್ರತಿನಿತ್ಯ ನೆನಪಿಸಿಕೊಳ್ಳಬೇಕು. ಶಾಲೆಗಳನ್ನು ಕಟ್ಟುವ ಮೂಲಕ ಜಗತ್ತನ್ನು ಕಟ್ಟಬಹುದು ಎಂದು ಅರಿತಿದ್ದ ಅವರು ಸುಳ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಕುರುಂಜಿಯವರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವಂತಾಗಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಮಾತನಾಡಿದರು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು.
ಯುವ ಸಾಧಕರಿಗೆ ಪ್ರಶಸ್ತಿ:
ಪಶು ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ನಿತಿನ್ ಪ್ರಭು, ಇಂಜಿನಿಯರಿಂಗ್ ಕ್ಷೇತ್ರದ ಹರಿಕೃಷ್ಣ ರೈ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅರವಿಂದ ಚೊಕ್ಕಾಡಿ, ಉದ್ಯಮ ಕ್ಷೇತ್ರದ ಎಸ್.ಆರ್.ಕೇಶವ, ಸಾಂಸ್ಕೃತಿಕ ಸಂಘಟನೆಯಲ್ಲಿ ತೇಜಸ್ವಿ ಕಡಪಳ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ತಾರಾ ನಂದನ್ ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು, ಕೋಶಾಧಿಕಾರಿ ಜನಾರ್ಧನ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು. ಉಷಾ ಚಂದ್ರಶೇಖರ ಪೇರಾಲು, ಚಂದ್ರಾಕ್ಷಿ ಜೆ ರೈ, ಚಿತ್ರಲೇಖಾ ಮಡಪ್ಪಾಡಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕೆ.ಟಿ.ವಿಶ್ವನಾಥ, ಪೂರ್ಣಿಮಾ ಮಡಪ್ಪಾಡಿ ಯುವ ಸಾಧಕರ ಪರಿಚಯ ಮಾಡಿದರು.ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಜನಾರ್ಧನ ನಾಯ್ಕ ವಂದಿಸಿದರು. ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಂಜೆ ಸುಳ್ಯದ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು. ರಾತ್ರಿ ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಕುಮಾರ ವೈಭವ’ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.











