ಸುಳ್ಯ:ಕರ್ನಾಟಕ ರಾಜ್ಯದ ಪ್ರತಿಷ್ಠಿತ ದಂತ ಮಹಾವಿದ್ಯಾಲಯಗಳಲ್ಲಿ ಒಂದಾದ ಕೆ.ವಿ.ಜಿ ದಂತಮಹಾವಿದ್ಯಾಲಯ ಮತ್ತು ದಕ್ಷಿಣ ಕೊರಿಯಾದ ಪ್ರತಿಷ್ಠಿತ ದಂತ ವೈದ್ಯಕೀಯ ಯಂತ್ರಗಳು ಮತ್ತು ವಸ್ತುಗಳ ತಯಾರಿಕಾ ಕಂಪೆನಿಯಾದ ಇಂಪ್ಲಾಂಟಿಯಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಗಳ ಮಧ್ಯೆ ಉನ್ನತ ವ್ಯಾಸಂಗದ (ಸೆಂಟರ್ ಆಫ್ ಎಕ್ಸಲೆನ್ಸ್) ಒಡಂಬಡಿಕೆ ಪತ್ರಕ್ಕೆ ಫೆಬ್ರವರಿ 16 ರಂದು ಸಹಿ ಹಾಕಲಾಯಿತು.
ಇಂಪ್ಲಾಂಟಿಯಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ
ಭಾರತೀಯ ವ್ಯವಸ್ಥಾಪಕ ನಿರ್ದೇಶಕ ಶ ಯುಹಾವಾನ ಯುವ ಅವರು ಕೆ.ವಿ.ಜಿ. ದಂತ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕಾಲೇಜಿನಲ್ಲಿ ಕಳೆದ 2 ವರ್ಷಗಳಿಂದ ನೀಡುತ್ತಿರುವ ಚಿಕಿತ್ಸೆಯ ಅತ್ಯಾಧುನಿಕ ಯಂತ್ರಗಳನ್ನು ವೀಕ್ಷಿಸಿ, ಕಾಲೇಜಿನ ಪ್ರಗತಿ ಮತ್ತು ಚಿಕೆತ್ಸೆಯ ನಿರ್ವಹಣೆಯ ಬಗ್ಗೆ ಮತ್ತು ಸುಳ್ಯದಂತಹ ಗ್ರಾಮೀಣ ಪ್ರದೇಶದ ಕಾಲೇಜು ಯಾವುದೇ ನಗರ ಪ್ರದೇಶದ ಕಾಲೇಜಿಗೂ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ಮತ್ತು ಚಿಕಿತ್ಸೆ ನೀಡುವ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು. ಒಡಂಬಡಿಕೆಯ ಪ್ರಕಾರ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ದಕ್ಷಿಣ ಕೊರಿಯಾಕ್ಕೆ ತೆರಳಬಹುದು.ಇದರಿಂದ ವಿದ್ಯಾರ್ಥಿಗಳಿಗೆ ಆಧುನಿಕ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ ಮತ್ತು ಇಂಪ್ಲಾಂಟಿಯಮ್ ಕಂಪೆನಿಯ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳನ್ನು ಕಾಲೇಜಿನಲ್ಲಿ ಅಳವಡಿಸಬಹುದಾಗಿದೆ.
ಇದೇ ಸಂದರ್ಭದಲ್ಲಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಾದ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಅಲ್ಲಿಯ ವಿಭಾಗಗಳನ್ನು ವೀಕ್ಷಿಸಿ, ಪ್ಲೇಸ್ಮೆಂಟ್ ಆಫೀಸರ್ ಅನಿಲ್ ಬಿ.ವಿ. ಯವರನ್ನು ಭೇಟಿಯಾಗಿ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಮುಂದಿನ ದಿನಗಳಲ್ಲಿ ಅವರ ಕಂಪೆನಿಗೆ ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆ.ವಿ.ಜಿ ದಂತ ಮಹಾವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರಾದ ಡಾ. ಮೋಕ್ಷಾನಾಯಕ್, ಡಾ. ಕೃಷ್ಣಪ್ರಸಾದ್ ಎಲ್., ಡಾ. ಮನೋಜ್ ಕುಮಾರ್ ಎ.ಡಿ. ಡಾ.ಸುಹಾಸ್ ರಾವ್ ಕೆ. ಹಾಗೂ ಡಾ.ಪ್ರಸನ್ನ ಕುಮಾರ್ ಡಿ. ಉಪಸ್ಥಿತರಿದ್ದರು.