ಸುಳ್ಯ. ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಠಿಯಿಂದ ಮತ್ತು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಸಹಕಾರದಿಂದ ಎರಡೂ ಕಡೆಯ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು ಎಂದು ಕೆವಿಜಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ವಿನಂತಿಸುವುದಾಗಿ ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ’ ಸುಳ್ಯದ ಹೆಮ್ಮೆಯಾದ ಕೆ.ವಿ.ಜಿ.ಶಿಕ್ಷಣ ಸಂಸ್ಥೆಗಳಲ್ಲಿ ಉಂಟಾಗಿರುವ ಗೊಂದಲ, ಭಿನ್ನಾಭಿಪ್ರಾಯ ದೂರವಾಗಿ ಎರಡೂ ಕಡೆಯವರು ಒಂದಾಗಿ ಕಾರ್ಯ
ನಿರ್ವಹಿಸಬೇಕು. ಡಾ.ಕುರುಂಜಿ ವೆಂಕಟ್ರಮಣ ಗೌಡರ ಆಶಯದಂತೆ ಹಾಗೂ ಅವರು ನೀಡಿದ ನಿರ್ದೇಶನ ಹಾಗೂ ಅಂದು ಅವರು ಮಾಡಿದ್ದ ಒಪ್ಪಂದಂತೆ ಎರಡೂ ಕಡೆಯ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು ಎಂದು ಸಮಾಜ ಆಗ್ರಹಿಸುತ್ತದೆ ಎಂದು ಅವರು ಹೇಳಿದರು.
ಭಿನ್ನಾಭಿಪ್ರಾಯ ಅಥವಾ ಗೊಂದಲಗಳಿಂದ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿ, ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅದಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕುರುಂಜಿ ವೆಂಕಟರಮಣ ಗೌಡರ ದೂರದೃಷ್ಟಿತ್ವದ ಫಲವಾಗಿ ಸುಳ್ಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಅನುಕೂಲ ಮಾಡುವುದರ ಜೊತೆಗೆ ಸುಳ್ಯ ಪರಿಸರದ ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿ ಅವರ ಕುಟುಂಬದ ಸಬಲತೆಗೆ ಕಾರಣರಾಗುವುದರೊಂದಿಗೆ ಸುಳ್ಯ ಪೇಟೆಯು ಕೂಡ ವಿಸ್ತಾರವಾಗಿ ಬೆಳೆದು ಸುಳ್ಯ ಎಂಬ ಹೆಸರು ರಾಜ್ಯ ಮತ್ತು ರಾಷ್ಟ್ರದಲ್ಲಿ ಗುರುತಿಸುವಂತೆ ಆಗಿದೆ. ಅಕ್ಷರ ಕ್ರಾಂತಿಯಿಂದ ಸುಳ್ಯವು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನಮಗೆಲ್ಲರಿಗೂ ಹೆಮ್ಮೆ. ಈ ಶಿಕ್ಷಣ ಸಂಸ್ಥೆಗಳಿಗೆ ತೊಂದರೆ ಆಗಬಾರದು, ಇಲ್ಲಿರುವ ಭಿನ್ನಾಭಿಪ್ರಾಯ ಪರಿಹರಿಸಬೇಕು ಎಂಬ ನೆಲೆಯಲ್ಲಿ ಸಮಾಜದ ಎಲ್ಲಾ ಮುಖಂಡರು ಸೇರಿ ‘ಕೆ.ವಿ.ಜಿ ಕ್ಯಾಂಪಸ್ ಹಿತ ರಕ್ಷಣಾ ಸಮಿತಿ’ಯನ್ನು ಹುಟ್ಟು ಹಾಕಿ ಸಮಿತಿಯ ನೆಲೆಯಲ್ಲಿ ಈ ವಿನಂತಿಯನ್ನು ಮಾಡುತ್ತಿರುವುದಾಗಿ ಭರತ್ ಮುಂಡೋಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಕಾರ್ಯಾಧ್ಯಕ್ಷ ಜಾಕೆ ಮಾಧವ ಗೌಡ, ಉಪಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಎಸ್.ಎನ್.ಮನ್ಮಥ, ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಸಂಚಾಲಕರಾದ ಪಿ.ಸಿ.ಜಯರಾಮ, ವೆಂಕಟ್ ದಂಬೆಕೋಡಿ, ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ಪದಾಧಿಕಾರಿಗಳಾದ ಸೋಮಶೇಖರ ಕೊಯಿಂಗಾಜೆ, ಜಯಪ್ರಕಾಶ್ ಕುಂಚಡ್ಕ,ರಾಧಾಕೃಷ್ಣ ಬೊಳ್ಳೂರು, ದೊಡ್ಡಣ್ಣ ಬರೆಮೇಲು, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ವಾಸುದೇವ ಗೌಡ ಕುಡೆಕಲ್ಲು, ಸತೀಶ್ ಕೂಜುಗೋಡು, ಪದ್ಮನಾಭ ಬೀಡು, ಮನಮೋಹನ್ ಕೆ.ಆರ್, ಕುಶಾಲಪ್ಪ ಪೆರುವಾಜೆ, ವಾಸುದೇವ ಅರಂಬೂರು, ಮೋನಪ್ಪ ಗೌಡ,ಪದ್ಮನಾಭ ಪಾತಿಕಲ್ಲು, ರಾಜೇಶ್ ಅಂಬೆಕಲ್ಲು ಚಿತ್ತರಂಜನ್ ಕೋಡಿ ಮತ್ತಿತರರು ಉಪಸ್ಥಿತರಿದ್ದರು.