ಸುಳ್ತ:ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಡಿ.26ರಂದು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಮೂಲಕ ದಶಮಾನೋತ್ಸವ ಸಂಭ್ರಮಾಚರಣೆಗೆ ಚಾಲನೆ ನೀಡಲಾಗುವುದು ಎಂದು ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋಧ ರಾಮಚಂದ್ರ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 9 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶದೊಂದಿಗೆ ಸುಳ್ಯದ ಪ್ರತಿಷ್ಠಿತ
ವಿದ್ಯಾಸಂಸ್ಥೆಯಾಗಿ ಬೆಳೆದಿರುವ ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು, ಇದೀಗ ದಶಮಾನೋತ್ಸವದ ಸಂಭ್ರಮದಲ್ಲಿದೆ. 2026-27ನೇ ಸಾಲಿನಲ್ಲಿ ಜರಗಲಿರುವ ದಶಮಾನೋತ್ಸವದ ಪೂರ್ವಭಾವಿಯಾಗಿ ಸಂಸ್ಥಾಪಕರಾದ ಡಾ.ಕುರುಂಜಿ ವೆಂಕಟರಮಣ ಗೌಡರ 97ನೇ ಜನ್ಮದಿನಾಚರಣೆಯ ಪ್ರಯುಕ್ತ ಡಿ.26 ರಂದು ‘ಆರೋಗ್ಯಕ್ಕಾಗಿ ಓಟ’ ಎಂಬ ಮ್ಯಾರಥಾನ್ ಆಯೋಜಿಸಲಾಗಿದೆ. ಕಾಲೇಜು ಅತ್ಯುತ್ತಮ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣದ ಮೂಲಕ ನಿರಂತರ ಶೇ.100 ಫಲಿತಾಂಶ ದಾಖಲಾಗಿದೆ.
ಒಂದು ದಶಕದ ಶೈಕ್ಷಣಿಕ ಪಯಣವನ್ನು ಪೂರೈಸುತ್ತಿರುವ ಕಾಲೇಜು, ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಕ್ರೀಡೆ ಮತ್ತು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದೆ. ದಶಮಾನೋತ್ಸವದ ಪ್ರಯುಕ್ತ ನಡೆಯುವ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ, ಟಿ-ಶರ್ಟ್ ಹಾಗೂ ಪದಕಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.2016ರಲ್ಲಿ ಪ್ರಾರಂಭವಾದ ಕಾಲೇಜಿನ ಯಶಸ್ವಿಗೆ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ.ವಿ., ಟ್ರಸ್ಟಿ ಡಾ.ಜ್ಯೋತಿ ಆರ್, ಪ್ರಸಾದ್, ಡಾ.ಅಭಿಜ್ಞ, ಮೌರ್ಯ ಆರ್.ಪ್ರಸಾದ್, ಸಂಪೂರ್ಣ ಬೆಂಬಲ ನೀಡಿದ್ದಾರೆ. ಆಡಳಿತ ಮಂಡಳಿ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ’ ಬಿ ‘ಯಲ್ಲಿ ಬರುವ ಎಲ್ಲ ಸಹ ಸಂಸ್ಥೆಗಳು

ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ. ಪ್ರಸಿದ್ದ ಕ್ರೀಡಾಪಟುಗಳು ಹಾಗೂ ಗಣ್ಯರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.ಬೆಳಿಗ್ಗೆ 6 ಗಂಟೆಗೆ ಮ್ಯಾರಥಾನ್ ಆರಂಭಗೊಂಡು 8 ಗಂಟೆಗೆ ಸಮಾಪನಗೊಳ್ಳಲಿದೆ ಎಂದು ವಿವರಿಸಿದರು.
ಮ್ಯಾರಥಾನ್ ವಿಭಾಗಗಳು:
ಮ್ಯಾರಥಾನ್ ಮೂರು ವಿಭಾಗಗಳಲ್ಲಿ ನಡೆಯಲಿದೆ:
ಪುರುಷರು (18 ವರ್ಷ ಮೇಲ್ಪಟ್ಟವರು) 10 ಕಿ.ಮೀ
ಮಹಿಳೆಯರು (ಎಲ್ಲಾ ವಯೋಮಾನದವರು): 5 ಕಿ.ಮೀ ಬಾಲಕರು (18 ವರ್ಷಕ್ಕಿಂತ ):5 ಕಿ.ಮೀ.
ನಗದು ಬಹುಮಾನಗಳು:
ಮೂರು ವಿಭಾಗಗಳಲ್ಲಿ ತಲಾ
ಪ್ರಥಮ ಬಹುಮಾನ-5,000,
ದ್ವಿತೀಯ ಬಹುಮಾನ ರೂ.
3,000, ತೃತೀಯ 2,000
ಚತುರ್ಥ ಮತ್ತು ಐದನೇ ಬಹುಮಾನ ನೀಡಲಾಗುವುದು.
ಪ್ರವೇಶ ಶುಲ್ಕ 200ರೂ.ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಟಿ-ಶರ್ಟ್ ಮತ್ತು ಸರ್ಟಿಫಿಕೇಟ್ ನೀಡಲಾಗುವುದು. ಓಟವನ್ನು ಪೂರ್ಣಗೊಳಿಸುವವರಿಗೆ ಪದಕ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು ಎಂದು ಅವರು ವಿವರಿಸಿದರು.
ಓಟದ ಮಾರ್ಗ:
ಪುರುಷರು (18 ವರ್ಷ ಮೇಲ್ಪಟ್ಟವರು): 10 ಕಿ.ಮೀ
ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಆರಂಭವಾಗಿ ಮ್ಯಾರಥಾನ್ ಕೆವಿಜಿ ಸರ್ಕಲ್-ವಿವೇಕಾನಂದ ಸರ್ಕಲ್- ಜ್ಯೋತಿ ಸರ್ಕಲ್- ಶ್ರೀರಾಂಪೇಟೆ- ಪೈಚಾರ್ ತನಕ ಸಂಚರಿಸಿ ಹಿಂತಿರುಗಿ ಸುಳ್ಯ ಬಸ್ ಸ್ಟ್ಯಾಂಡ್ – ಚೆನ್ನಕೇಶವ ದೇವಸ್ಥಾನ ದಾರಿ ಮುಖಾಂತರ ಪುನಃ ಕಾಲೇಜಿನಲ್ಲಿ ಅಂತ್ಯಗೊಳ್ಳಲಿದೆ.

ಮಹಿಳೆಯರು (ಎಲ್ಲಾ ವಯೋಮಾನದವರು): 5 ಕಿ.ಮೀ ಹಾಗೂ ಬಾಲಕರು (18ವರ್ಷಕ್ಕಿಂತ ಕಡಿಮೆ):5 ಕಿ.ಮೀ
ವಿವೇಕಾನಂದ ಸರ್ಕಲ್ ಶ್ರೀರಾಂಪೇಟೆ ಸುಳ್ಯ ಬಸ್ ಸ್ಟ್ಯಾಂಡ್ ಗಾಂಧಿನಗರ ಉಡುಪಿ ಗಾರ್ಡನ್ ಬಳಿ ತೆರಳಿ ಹಂತಿರುಗಿ ಚೆನ್ನಕೇಶವ ದೇವಸ್ಥಾನ ದಾರಿ ಮುಖಾಂತರ ಪುನಃ ಕಾಲೇಜಿನಲ್ಲಿ ಅಂತ್ಯಗೊಳ್ಳಲಿದೆ. ಮಾರ್ಗದುದ್ದಕ್ಕೂ ನೀರಿನ ಸ್ಟೇಷನ್ಗಳು, ವೈದ್ಯಕೀಯ ಸೇವೆ, ತುರ್ತು ವಾಹನ ವ್ಯವಸ್ಥೆ ಹಾಗೂ ಭಾಗವಹಿಸುವರಿಗಾಗಿ ಬೆಳಗಿನ ಲಘು ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ದೀಪಕ್ ವೈ.ಆರ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಕಮಿಟಿ ಬಿ ಇದರ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಕೆವಿಜಿ ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ, ಅಕಾಡೆಮಿಯ ಕಚೇರಿ ಮುಖ್ಯಸ್ಥರಾದ ಪ್ರಸನ್ನ ಕಲ್ಲಾಜೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜೇಶ್ ಉಪಸ್ಥಿತರಿದ್ದರು.





