ಸುಳ್ಯ: ಕೆವಿಜಿ ವಿದ್ಯಾಸಂಸ್ಥೆಗಳಲ್ಲಿ ಯಾವುದೇ ಗೊಂದಲಗಳಾಗಲೀ, ಸಮಸ್ಯೆಗಳಾಗಲಿ ಇಲ್ಲಾ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ತಿಳಿಸಿದ್ದಾರೆ. ನಿನ್ನೆ ಕೆವಿಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿ ನಡೆಸಿದ ಪತ್ರಿಕಾಗೋಷ್ಠಿಗೆ ಉತ್ತರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ಯಾಂಪಸ್ ಹಿತ ರಕ್ಷಣಾ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಕಾರ್ಯ ವ್ಯಾಪ್ತಿಯಲ್ಲಿ
ಬರುವ ವಿದ್ಯಾ ಸಂಸ್ಥೆಗಳಲ್ಲಿ ಗೊಂದಲ ಉಂಟಾಗಿದೆ ಹಾಗೂ ವಿದ್ಯಾರ್ಥಿಗಳ, ಸಿಬ್ಬಂದಿ ವರ್ಗದಲ್ಲಿ ಅನಿಶ್ಚಿತತೆ ಹಾಗೂ ಸಿಬ್ಬಂದಿಗಳ ಸೇವಾ ಭದ್ರತೆಗೆ ದಕ್ಕೆ ಉಂಟಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ವಿಷಯವಾಗಿರುತ್ತದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕರ್ನಾಟಕ ಸೊಸೈಟಿ ಅಧಿನಿಯಮಗಳು ೧೯೬೦ರ ಪ್ರಕಾರ ದಿ.ಡಾ. ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿದ ಸಂಸ್ಥೆಯಾಗಿರುತ್ತದೆ. ಹಾಗೂ ನಿಯಮ ಪ್ರಕಾರ ಇದರ ಚಟುವಟಿಕೆಗಳು ನಿರಂತವಾಗಿ ಯಾವುದೇ ತೊಂದರೆಗಳಿಲ್ಲದೇ ಸಂಸ್ಥೆಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದೆ. ಈ ತನಕ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಲೀ ಸಿಬ್ಬಂದಿಗಳಿಗಾಗಲೀ ಯಾವುದೇ ತೊಂದರೆಗಳು ಆಗಿರುವುದಿಲ್ಲ. ಅಲ್ಲದೆ ಸಂಸ್ಥೆಯಡಿಯಲ್ಲಿ ನಡೆಯುವ ಸಂಸ್ಥೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಾಗಲಿ ಹಾಗೂ ಗೊಂದಲಗಳಿರುವುದಿಲ್ಲ ಹಾಗೂ ಯಾವುದೇ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಗೊಂದಲ ಪಡುವ ಅವಶ್ಯಕತೆ ಇರುವುದಿಲ್ಲ. ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ವೇದಿಕೆಯ ಹೆಸರಿನಲ್ಲಿ ನಡೆಸಿರುವ ಪತ್ರಿಕಾ ಗೋಷ್ಠಿಯು ಈಗಾಗಲೇ ಸಂಸ್ಥೆಯಿಂದ ಅಮಾನತುಗೊಂಡಿರುವ ವ್ಯಕ್ತಿಗಳನ್ನು ರಕ್ಷಣೆ ಮಾಡಲು ನೀಡಿರುವ ಪತ್ರಿಕಾ ಹೇಳಿಕೆಯಾಗಿರುತ್ತದೆ ಎಂದು ಹೇಳಿದ್ದಾರೆ. ಇದು ನೋಂದಾಯಿತ ಸಂಸ್ಥೆಗೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ಹೊರಗಿನವರು ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಈ ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.









