ತುಮಕೂರು:ತುಮಕೂರಿನಲ್ಲಿ ಜ.18 ಮತ್ತು 19 ರಂದು ನಡೆದ 39 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ‘ಸುದ್ದಿಮನೆ ಮತ್ತು ಫೋಟೋಗ್ರಫಿ’ ವಿಷಯದ ಗೋಷ್ಠಿಯಲ್ಲಿ ರಾಜ್ಯದ ಪ್ರಮುಖ ಮೂರು ಪತ್ರಿಕೆಗಳ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತರು ಹಾಗೂ ವನ್ಯಜೀವಿ ಛಾಯಾಚಿತ್ರಕಾರರು ಆದ ಶಿವಸುಬ್ರಹ್ಮಣ್ಯ ಕೆ. ವಿಚಾರ ಮಂಡಿಸಿದರು. ಅವರ ಭಾಷಣದ ಆಯ್ದ ಭಾಗ ಇಲ್ಲಿದೆ.’ಫೋಟೋ, ಫೊಟೋಗ್ರಾಫರ್ ಸುದ್ದಿ ಮನೆಯಲ್ಲಿ ಇಲ್ಲದಿದ್ದರೆ ಏನಾಗಬಹುದು? ನಮಗೆ ಡ್ರೆಸ್ ಇದ್ದಂತೆ ಪತ್ರಿಕೆಗೆ ಒಂದು ಫೊಟೋ.ಡ್ರೆಸ್ ಇಲ್ಲದಿದ್ದರೆ ನಾವು ನಗ್ನರಾದಂತೆ ಪತ್ರಿಕೆಗೆ
ಫೊಟೋ ಇಲ್ಲದಿದ್ದರೆ ಪತ್ರಿಕೆ ನಗ್ನವೇ! ಆದರೆ, ಇಂದಿನ ಪತ್ರಿಕೋದ್ಯಮದ ದುರಂತವೆಂದರೆ ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ಪತ್ರಿಕೆಗಳಲ್ಲಿ ಬೆರಳೆಣಿಕೆ ಉತ್ತಮ ಫೊಟೋ ಹೊರತುಪಡಿಸಿದರೆ, ಪ್ರಮುಖ ಸುದ್ದಿ ಪುಟಗಳಲ್ಲಿ ಉತ್ತಮ ಫೊಟೋಗಳೇ ಮುದ್ರಣಗೊಂಡಿಲ್ಲ. ಆಯಾ ಸಂಪಾದಕರಿಗೆ ಫೊಟೋಗ್ರಫಿ ಬಗ್ಗೆ ಜ್ಞಾನದ ಕೊರತೆಯೆ? ಆಸಕ್ತಿ ಕಡಿಮೆ ಆಗಿದೆಯೇ? ಪತ್ರಿಕೆಗಳ ಪಾಲಿಸಿ ಬದಲಾಗಿದೆಯೇ? ಅಥವಾ ಫೊಟೋಗ್ರಾಫರ್ಗಳ ವೃತ್ತಿಪರತೆ ಕಡಿಮೆಯಾಗಿದೆಯೇ? ಎಂಬ ಪ್ರಶ್ನೆ ಕೇಳಬೇಕಾಗುತ್ತದೆ.ಪತ್ರಿಕೆಗಳಲ್ಲಿ ಸುದ್ದಿಗಳನ್ನೇ ತುಂಬಿಸುವ ಧಾವಂತದಲ್ಲಿ ಉತ್ತಮ ಫೊಟೋಗಳೇ ಜಾಗವೇ ಕಡಿಮೆಯಾಗುತ್ತಿದೆ.
ಈ ವೇದಿಕೆ ಮೂಲಕ ಎಲ್ಲಾ ಸಂಪಾದಕರಿಗೆ ಮನವಿ ಮಾಡುತ್ತಿದ್ದೇನೆ- ದಯಮಾಡಿ ನಿಮ್ಮ ಪತ್ರಿಕೆಯ ಫೊಟೋಗ್ರಾಫರ್ಗೆ ಇನ್ನಷ್ಟು ಅವಕಾಶ ಕೊಡಿ. ಅವರ ಉತ್ತಮ ಫೊಟೋ ಆಗಾಗ ಪ್ರಕಟಿಸಿ. ಇಲ್ಲದಿದ್ದಲ್ಲಿ

ರಾಜ್ಯಮಟ್ಟದಲ್ಲಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಫೊಟೋಗ್ರಾಫರ್ ಖ್ಯಾತಿ ಗಳಿಸುವುದು ಮುಂದಿನ ಹತ್ತು ವರ್ಷವಾದರೂ ಸಾಧ್ಯವಿಲ್ಲ.ಟಿವಿಗಳಲ್ಲಿ ವೀಡಿಯೋ ಇಲ್ಲದೆ ಕೇವಲ ಬ್ರೇಕಿಂಗ್ ಸುದ್ದಿ ಎಂದು ಹಾಕಿದರೆ ವೀಕ್ಷಕರನ್ನು ಸೆಳೆಯಲು ಸಾಧ್ಯವಿಲ್ಲ. ವೀಕ್ಷಕ ವಿಶುವಲ್ ಗೆ ಕಾಯುತ್ತಾನೆ. ಆದರೆ ಪತ್ರಿಕೆಗಳಲ್ಲಿ ಸುದ್ದಿಗಳನ್ನೇ ಹೆಚ್ಚು ತುಂಬಿಸಿ ಕಳಿಸುತ್ತಾರೆ.ಇದರಿಂದಾಗಿ ಪತ್ರಿಕೆಗಳಲ್ಲಿ ಫೊಟೋಗ್ರಾಫರ್ ಸಂಖ್ಯೆಯೇ ಕಡಿಮೆಯಾಗುತ್ತಿದೆ.ಕೋವಿಡ್ ಕಾಲದ ನಂತರ ಅನೇಕ ಪತ್ರಿಕಾ ಫೊಟೋಗ್ರಾಫರ್ಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಸಾಲ ಮಾಡಿ ದುಬಾರಿ ಕೆಮೆರಾ ಖರೀದಿಸಿದ್ದ ಫೊಟೋಗ್ರಾಫರ್ ಉದ್ಯೋಗ ಕಳೆದುಕೊಂಡು ಏನು ಮಾಡಬೇಕು? ತುಂಬಾ ವಿಷಾದದಿಂದ ಹೇಳುತ್ತಿದ್ದೇನೆ ಈಗ ಸುದ್ದಿಮನೆಯ ಫೊಟೋಗ್ರಾಫರ್ ಗಳು ನಮ್ಮ ಪ್ರಾಬ್ಲೆಮ್ ಯಾರಿಗೆ ಹೇಳಲಿ? ಎಂಬ ಕಳವಳಕಾರಿ ಪರಿಸ್ಥಿಯಲ್ಲಿ ಇದ್ದಾರೆ. ಸುದ್ದಿಮನೆಯಲ್ಲೇ ಫೊಟೋಗ್ರಾಫರ್ ಮೂಲೆಗುಂಪು ಆಗುತ್ತಿದ್ದಾರೆಯೇ ಎಂಬ ಭಾವನೆ ಮೂಡುತ್ತಿದೆ.
ಹಗಲಿರುಳು ಜೀವ ಪಣಕ್ಕೆ ಇಟ್ಟು ಫೊಟೋ ತೆಗೆದು ಅದನ್ನು ಸುದ್ದಿಮನೆಯಲ್ಲಿ ಕೊಟ್ಟು ಮರುದಿನ ಪ್ರಕಟಣೆಗಾಗಿ ಕಾದು, ಪ್ರಕಟವಾಗದೇ ಇದ್ದರೆ ಫೊಟೋಗ್ರಾಫರ್ ಫೊಟೋ ಕೊಟ್ಟು ಕೋಡಂಗಿ ಆಗುತ್ತಿರುವುದು ವಿಷಾದದ ಸಂಗತಿ. ಕಳೆದ ಕೆಲವು ವರ್ಷಗಳಲ್ಲಿ ವರದಿಗಾರರ ಸಿಂಡಿಕೇಟ್ ಇದೆ. ಬೆಂಗಳೂರಿನ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಬೀದರ್, ಚಾಮರಾಜನಗರದ ಸ್ಥಳೀಯ ಪತ್ರಿಕೆಗಳಲ್ಲಿ ಅದೇ ಶಬ್ದ,ಸಬ್ ಹೆಡ್ಡಿಂಗ್, ಪ್ಯಾರಗಳೊಂದಿಗೆ ಪ್ರಕಟವಾಗುತ್ತಿವೆ! ಅದೇ ರೀತಿ ಫೊಟೋಗ್ರಾಫರ್ಗಳ ಸಿಂಡಿಕೇಟ್ ಆಗುತ್ತಿದೆ.ಹೆಚ್ಚು ರೆಸಲ್ಯೂಷನ್ ಬೇಡವಾಗಿದೆ. ಕಡಿಮೆ ರೆಸಲ್ಯೂಷನ್ ಫೊಟೋಗಳು ಕಂಪೋಸಿಷನ್ ಕೂಡಾ ಸರಿಯಾಗಿಲ್ಲದೆ ಒಂದೇ ಫೊಟೋ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಉತ್ತಮ ಕಂಪೋಸಿಷನ್ ಇಲ್ಲದ ಮೊಬೈಲ್ ಫೊಟೋಗಳು ಪ್ರಕಟವಾಗುತ್ತಿರುವುದು , ಸುದ್ದಿಮನೆಯ

ಫೊಟೋಗ್ರಾಫರ್ಗಳ ಭವಿಷ್ಯಕ್ಕೆ ಅಪಾಯಕಾರಿಯೇ.
ಒಂದು ಸುದ್ದಿಗೆ, ವಿಶೇಷ ವರದಿಗೆ, ಲೇಖನಕ್ಕೆ ಅಂದ ಹೆಚ್ಚಿಸುವ ಕೆಲಸವನ್ನು ಫೊಟೋ ಮಾಡುತ್ತದೆ. ಪತ್ರಿಕೆ ಮೇಲೆ ವಿಶ್ವಾಸಾರ್ಹತೆ ಹೆಚ್ಚಿಸುವ ಕೆಲಸವನ್ನು ಫೊಟೋ ಮಾಡುತ್ತದೆ.
ಸುದ್ದಿಮನೆಯ ಫೊಟೋಗಳು ನಮಗೆ ಇತಿಹಾಸವನ್ನು ಹೇಳಬಲ್ಲದು. ಫೊಟೋ ಜರ್ನಲಿಸಂ ವ್ಯಾಖ್ಯಾನ ಕೇವಲ ಫೊಟೋಗ್ರಾಫರ್ಗಳಿಗೆ ಅನ್ವಯ ಅಲ್ಲ. ಎಲ್ಲ ಉಪಸಂಪಾದಕರೂ, ವರದಿಗಾರರು ಫೊಟೋಗ್ರಫಿ ಕಲಿಯಬೇಕು.ಫೊಟೋಗ್ರಫಿ ಕಲಿಯುತ್ತಿದ್ದೇನೆ, ಮಾಡುತ್ತಿದ್ದೇನೆ ಎಂದು ಪತ್ರಕರ್ತರು ಬಹಿರಂಗಪಡಿಸಬೇಕಾಗಿಲ್ಲ. ಹವ್ಯಾಸವಾಗಿ ಮುಂದುವರಿಸಬಹುದು.ನಾನು ಹಕ್ಕಿ ಫೊಟೋಗ್ರಫಿ ಮಾಡುತ್ತಿದ್ದುದು ಅನೇಕ ವರ್ಷ ಕಚೇರಿಯಲ್ಲೇ ತಿಳಿದಿರಲಿಲ್ಲ. ಮಧ್ಯರಾತ್ರಿವರೆಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ, ಬೆಳಗಿನ ಜಾವ ಐದು ಗಂಟೆಗೇ ಎದ್ದು ವಲಸೆ ಹಕ್ಕಿಗಳ ಫೊಟೋಗ್ರಫಿಗೆ ವೈಲ್ಡ್ ಲೈಫ್ ಫೊಟೋಗ್ರಾಫರ್ ಸ್ನೇಹಿತರ ಜತೆ ಹೋಗುತ್ತಿದ್ದೆ.
ಸುದ್ದಿಮನೆಯ ಫೊಟೋಗ್ರಾಫರ್ ಗಳಿಗೆ ನನ್ನ ಕಿವಿಮಾತು-ದಯವಿಟ್ಟು ಅಸೈನ್ ಮೆಂಟ್ ಮುಗಿಸಿ ಫೊಟೋ ಕೊಟ್ಟು ಸುಮ್ಮನಾಗಬೇಡಿ. ನಿಮ್ಮ ಫೊಟೋಗ್ರಫಿ ಜ್ಞಾನವನ್ನು ಸುದ್ದಿಮನೆಯ ಪತ್ರಕರ್ತ ರೊಡನೆ ಹಂಚಿಕೊಳ್ಳಿ.ಫೊಟೋಗ್ರಫಿ ಎಂದರೆ ಕೇವಲ ಮಂತ್ರಿ, ಶಾಸಕರ ಫೋಟೋ ತೆಗೆಯುವುದಲ್ಲ. ರಾಜ್ಯದ ಇತಿಹಾಸವನ್ನು ಫೋಟೋಗಳ ಮೂಲಕ ದಾಖಲಿಸಲು ನಿಮಗೆ ಅವಕಾಶವಿದೆ.ಸಾಹಿತಿಗಳ, ಕಲಾವಿದರ ಫೋಟೋ ದಾಖಲಿಸಿ. ಭೌಗೋಳಿಕವಾಗಿ ಆಯಾ ಪ್ರದೇಶಗಳನ್ನು ಫೊಟೋಗಳಲ್ಲಿ ದಾಖಲಿಸಿ.ಹಳ್ಳಿಯ ಚಿತ್ರಣಗಳು ಬದಲಾಗುತ್ತಿದೆ. ಬದಲಾಗುವ ಸನ್ನಿವೇಶಗಳನ್ನು ಫೊಟೋಗ್ರಾಫರ್ ಅತ್ಯುತ್ತಮವಾಗಿ ದಾಖಲಿಸಬಹುದು. ಹಳ್ಳಿಗಳಲ್ಲೂ ಜನರು ಸೆಲ್ಫಿ ಹುಚ್ಚರಾಗುತ್ತಿದ್ದಾರೆ. ಗ್ರಾಮೀಣ ಭಾಗದ ಅನೇಕ ಫೊಟೋಗ್ರಾಫರ್ ಗಳು ಮದುವೆ ಫೊಟೋಗ್ರಾಫರ್ ಮಾತ್ರ ಆಗುತ್ತಿದ್ದಾರೆ.(ಅದು ವೃತ್ತಿ, ಕುಟುಂಬ ನಿರ್ವಹಣೆಗೆ ಅದೂ ಬೇಕು ಎಂಬುದು ನಾನು ಒಪ್ಪುತ್ತೇನೆ.).
ಆದ್ದರಿಂದ ಅಪೂರ್ವ ಫೊಟೋ ದಾಖಲೆ ಮಾಡಲು ಸುದ್ದಿ ಮನೆಯ ಫೊಟೋಗ್ರಾಫರ್ ಗಳು ಮುಂದೆ ಬರಬೇಕು.
ಆರ್ಥಿಕವಾಗಿ ಸದೃಢವಾಗಿರುವ ಪತ್ರಿಕೆಗಳು, ಅವರ ಫೊಟೋಗ್ರಾಫರ್ ಗಳ ಅತ್ಯುತ್ಯಮ ಫೊಟೋಗಳ ಕಾಫಿ ಟೇಬಲ್ ಪುಸ್ತಕ ಮುದ್ರಿಸಿ ಡಿಜಿಟಲ್ ರೂಪದಲ್ಲಿ ಸಿಗುವಂತೆ ಮಾಡಬೇಕು. ಛಾಯಾಚಿತ್ರಕಾರರ ಸಂಘವು ಫೊಟೋ ಪ್ರದರ್ಶನದ ಜತೆಗೆ ಅತ್ತುತ್ತಮ 500 ಫೊಟೋಗಳ ಕಾಫಿ ಟೇಬಲ್ ಪುಸ್ತಕ ಮಾಡಿ, ಡಿಜಿಟಲ್ ರೂಪದಲ್ಲಿ ಸಿಗುವಂತೆ ಮಾಡಬೇಕು. ಸಂಘವು ಫೊಟೋಗಳ ಪ್ರದರ್ಶನಗಳಲ್ಲಿ ಹೊಸ ಅತ್ತುತ್ತಮ ಫೊಟೋಗಳನ್ನೂ ಪ್ರದರ್ಶಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಡಿದರು.