*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಮೋಹನ್ಲಾಲ್ ಅಭಿನಯದ ಕೃಷಿ ಪ್ರಧಾನ ಚಲನಚಿತ್ರ ‘ಇವಿಡಂ ಸ್ವರ್ಗಮಾಣ್’ ಎಂಬ ಸಿನಿಮಾ ನೋಡಿದವರಿಗೆ ಆ ಸಿನಿಮಾದಲ್ಲಿನ ಮೋಹನ್ ಲಾಲ್ ಪಾತ್ರದ ಕೃಷಿ ತೋಟ ಹಾಗೂ ಫಾರ್ಮ್ ಮನದಿಂದ ಮಾಯವಾಗಲು ಸಾಧ್ಯವಿಲ್ಲ. ಯಾಕೆಂದರೆ ಆ ಹಸಿರು ಕೃಷಿಲೋಕ ಇನ್ನಿಲ್ಲದಂತೆ ಮನ ಸೆಳೆಯುತ್ತದೆ. ಅದೇ ರೀತಿಯ ಸುಂದರ ತೋಟವೊಂದು ಸುಳ್ಯ ಉಬರಡ್ಕದಲ್ಲಿದೆ.ಮಿಶ್ರ ಕೃಷಿಯ ಆಗರ, ಕೃಷಿ ವೈವಿಧ್ಯತೆಯ ಈ ಸುಂದರ ತೋಟದ ಜನಕ ಉಬರಡ್ಕ ಕುತ್ತಮೊಟ್ಟೆಯ ಕನಕರಂಕೋಡಿಕೃಷ್ಣನ್ ನಾಯರ್. ಇವರ ನಾಲ್ಕು ಏಕ್ರೆ ಕೃಷಿ ಭೂಮಿಯಲ್ಲಿ
ಏನಿದೆ.. ಏನಿಲ್ಲ ಎಂದು ಕೇಳುವುದು.. ಹೇಳುವುದು ಕಷ್ಟ. ಇಲ್ಲಿ ಇವರು ಮಾಡದ ಕೃಷಿಯೇ ಕಡಿಮೆ ಎನ್ನಬಹುದು. ಭಿನ್ನ ಕೃಷಿ ರೀತಿ, ಅಧಮ್ಯ ಕೃಷಿ ಆಸಕ್ತಿಯ ಮೂಲಕ ಮಿಶ್ರ ಕೃಷಿಯ ಆಗರವನ್ನೇ ರೂಪಿಸಿದ್ದಾರೆ, ಬಹು ಬೆಳೆಯ ಕಣಜದ ಹಸಿರು ಲೋಕವನ್ನೇ ಸೃಷ್ಠಿಸಿದ್ದಾರೆ. ವೈವಿಧ್ಯಮಯ ಬೆಳೆಗಳನ್ನೂ, ಉಪ ಬೆಳೆಗಳನ್ನೂ ಹೊಂದಿರುವ ಸುಂದರವಾದ ತೋಟ ಕೃಷ್ಣನ್ ನಾಯರ್ ಅವರದ್ದು.
ಎರಡು ದಶಕಗಳ ಹಿಂದೆ ಕಾಸರಗೋಡು ಜಿಲ್ಲೆಯ ಕುಂಡಂಕುಯಿ ಆಡರಮುಂಡ ಎಂಬ ಸ್ಥಳದಿಂದ ಬಂದು ಸುಳ್ಯದಲ್ಲಿ ಜಮೀನು ಖರೀದಿಸಿ ಕೃಷಿ ಆರಂಭಿಸಿದ್ದರು ಇವರು.
ಬಹು ಬೆಳೆಯ ಸ್ವರ್ಗ..
ಅಡಿಕೆ, ತೆಂಗು ಕಾಳುಮೆಣಸು ಕೃಷಿಯ ಮುಖ್ಯ ಬೆಳೆಗಳೊಂದಿಗೆ ಉಪ ಬೆಳೆಗಳ ದೊಡ್ಡ ಲೋಕ ಸೃಜಿಸಿದ್ದಾರೆ. ಕೊಕ್ಕೋ, ಬಾಳೆ, ಅಗರ್ವುಡ್, ಅರಿಶಿನ, ಶುಂಠಿ, ಲವಂಗ, ಜಾಯಿ ಕಾಯಿ, ಮರ ಗೆಣಸು, ಕಾಫಿ ಮುಂತಾದ ಅಂತರ ಬೆಳೆಗಳಿವೆ. ಹಲವು ತರಕಾರಿಗಳನ್ನು ಬೆಳೆಸಿದ್ದಾರೆ. ಬೆಂಡೆಕಾಯಿ, ಪಡವಲ ಕಾಯಿ, ಹಲಸಂಡೆ, ಕುಂಬಳಕಾಯಿ ಹೀಗೆ ನಾನಾ ಬಗೆಯ ತರಕಾರಿಗಳು ಹಸಿರು ಸೂಸಿ ಕಂಗೊಳಿಸುತ್ತಿವೆ. ಕ್ವಾಲಿಫ್ಲವರ್, ಕ್ಯಾಬೇಜ್ ಸೇರಿದಂತೆ ಹಲವು ತರಕಾರಿಗಳನ್ನು ಬೆಳೆಯಲಾಗುತ್ತದೆ. ವರ್ಷವಿಡೀ ಇಲ್ಲಿ
ತರಕಾರಿ ತೋಟದಲ್ಲಿ ಕೃಷ್ಣನ್ ನಾಯರ್
ತರಕಾರಿಗಳು ಮತ್ತು ಅಂತರ ಬೆಳೆಗಳು ಬೆಳೆದು ಫಸಲು ನೀಡುತ್ತವೆ.ಹಲವು ಹಣ್ಣಿನ ಗಿಡಗಳನ್ನೂ ಬೆಳೆಸಿದ್ದಾರೆ ಕೃಷ್ಣನ್ ನಾಯರ್. ಫ್ಯಾಶನ್ ಫ್ರೂಟ್, ಬಟರ್ ಫ್ರೂಟ್, ಡ್ರ್ಯಾಗನ್ ಫ್ರೂಟ್, ರಂಬುಟಾನ್, ಅನಾನಸ್ ಇತ್ಯಾದಿಗಳು ತೋಟದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಲೋವೆರಾ, ಸರ್ವ ಸುಗಂಧಿ, ಹಲಸು, ಮಾವು ಇವರ ಕೃಷಿ ವೈವಿಧ್ಯತೆಯ ಪಟ್ಟಿ ಉದ್ದ ಇದೆ.
ಮೀನು, ಕೋಳಿ, ಜೇನು ಮತ್ತು ಹಸು ಸಾಕಣೆ:
ಕೃಷಿಯ ಜೊತೆಗೆ ಇತರ ಉಪ ಕೃಷಿಗಳೂ ನಾಯರ್ ಅವರ ತೋಟದಲ್ಲಿ ಪಸಂದಾಗಿದೆ. ಮೀನು ಸಾಕಣೆ, ಕೋಳಿ ಸಾಕಾಣಿಕೆ, ಹಸು ಸಾಕಾಣಿಕೆಯನ್ನು ಬಹು ಪ್ರಾಮುಖ್ಯತೆಯಿಂದ ಮಾಡುತ್ತಾರೆ. ತೋಟದಲ್ಲಿ ಮತ್ತು ಮನೆಯ ಸಮೀಪದಲ್ಲಿರುವ ನಾಲ್ಕು ಕೊಳಗಳಲ್ಲಿ ವಿವಿಧ ರೀತಿಯ
ಮೀನುಗಳನ್ನು ಸಾಕುತ್ತಾರೆ. ತಿಲಾಪಿಯಾ, ಅಸ್ಸಾಂ ವಾಲಾ, ಬ್ರಾಲ್ ಮುಂತಾದ ವಿವಿಧ ಜಾತಿಯ ಮೀನುಗಳನ್ನು ಇಲ್ಲಿ ಸಾಕಲಾಗಿದೆ. ಎಲ್ಲಾ ಕೆರೆಗಳಲ್ಲಿಯೂ ವಿವಿಧ ಜಾತಿಯ ನೂರಾರು ಮೀನುಗಳಿವೆ. ನಾಯರ್ ಆಹಾರ ಹಾಕಿ ಅಕ್ಕರೆಯಿಂದ ಕರೆದಾದ ಅವು ಮೇಲೆ ಬಂದು ಸೇರಿಕೊಳ್ಳುತ್ತವೆ.
ಟರ್ಕಿ ಕೋಳಿ, ಔಷಧೀಯ ಗುಣ ಹೆಚ್ಚಿರುವ ಕರಿ ಕೋಳಿ ಸೇರಿ ನೂರಕ್ಕೂ ಹೆಚ್ಚು ಕೋಳಿಗಳ ಕಲರವ ಇವರ ಜಮೀನು ತುಂಬೆಲ್ಲಾ ತುಂಬಿದೆ. ಜೊತೆಗೆ ಬಾತುಕೋಳಿಯೂ ಇವೆ. ಮಲೆನಾಡ ಗಿಡ್ಡ ದನಗಳನ್ನೂ ಸಾಕುತ್ತಾರೆ. ಸಣ್ಣ ಮಟ್ಟಿನಲ್ಲಿ ಜೇನು ಕೃಷಿಯನ್ನೂ ಮಾಡುತ್ತಾರೆ. ಜೊತೆಗೆ ಪ್ರೀತಿಯ ನಾಲ್ಕು ಬೆಕ್ಕುಗಳು, ನಾಯಿಗಳೂ ಇವೆ.
ಜೀವಾಮೃತ ತಯಾರಿಸುತ್ತಿರುವ ನಾಯರ್
ಸಂಪೂರ್ಣ ಸಾವಯವ ಕೃಷಿ:
ಅಡಿಕೆ ಪ್ರಮುಖ ಬೆಳೆಯಾಗಿರುವ ಕೃಷ್ಣನ್ ನಾಯರ್ ಅವರ ತೋಟದಲ್ಲಿ ಪೂರ್ತಿಯಾಗಿ ಸಾವಯವ ಕೃಷಿಯನ್ನೇ ಮಾಡುತ್ತಾರೆ.
ಮನೆಯ ದನಗಳ ಸೆಗಣಿ ಮತ್ತು ಇತರ ಕೃಷಿ ತ್ಯಾಜ್ಯಗಳನ್ನು ಸೇರಿಸಿ ತಯಾರಿಸುವ ಸಾವಯವ ಗೊಬ್ಬರ ಹಾಗೂ ಜೀವಾಮೃತ ಬಳಸುತ್ತಾರೆ. ಗೋಮೂತ್ರ ಮತ್ತು ಸೆಗಣಿ ಇತ್ಯಾದಿಗಳನ್ನು ಸೇರಿಸಿ ತಯಾರಿಸಿದ ಜೀವಾಮೃತ ತಿಂಗಳಿಗೆ ಒಂದು ಬಾರಿ ಎಂಬಂತೆ ಎಲ್ಲಾ ಗಿಡಗಳಿಗೂ ನೀಡಲಾಗುತ್ತಿದೆ.ಕಂಗಿನ ಬುಡದಲ್ಲಿ ಗೊಬ್ಬರ, ಜೀವಾಮೃತ ಇತ್ಯಾದಿಗಳನ್ನು ಹಾಕುವ ಬದಲು ಅಡಿಕೆ ಮರದ ಸಾಲಿನ ಮಧ್ಯೆ ಕಣಿ ಮಾಡಿ ಅದರಲ್ಲಿ ಗೊಬ್ಬರ ಮತ್ತು ಜೀವಾಮೃತವನ್ನು ನೀಡುವ
ವಿಧಾನವನ್ನು ಅವರು ಅನುಸರಿಸುತ್ತಾರೆ. ಇದರಿಂದ ಅಡಿಕೆ ಮರದ ಬೇರುಗಳಿಗೆ ಸಮಾನಾಗಿ ಗೊಬ್ಬರ ಸಿಗುತ್ತದೆ ಮತ್ತು ಬುಡ ಬಿಡಿಸುವುದರಿಂದ ಬೇರಿಗೆ ಹಾನಿಯಾಗುವುದು ತಪ್ಪುತ್ತದೆ ಎನ್ನುತ್ತಾರೆ ನಾಯರ್. ಒಟ್ಟಿನಲ್ಲಿ ಇವರ ತೋಟ ಕೃಷಿ ಆಸಕ್ತರಿಗೆ, ಅಧ್ಯಯನಾಸಕ್ತರಿಗೆ ಒಂದು ಕೃಷಿ ಪಾಠ ಪುಸ್ತಕ ಇದ್ದಂತೆ ಇದೆ. ಅತಿ ಕಡಿಮೆ ಸ್ಥಳದಲ್ಲಿ ಹೇಗೆ ಮಿಶ್ರ ಬೆಳೆಯನ್ನು ಹೆಚ್ಚು ಬೆಳೆಸಬಹುದು, ಎಲ್ಲ ಕೃಷಿಯನ್ನೂ ಬೆಳೆಯಬಹುದು ಎಂಬುದಕ್ಕೆ ಮಾದರಿಯಂತಿದೆ.
ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಸುಳ್ಯ ಕರಯೋಗಂ ಅಧ್ಯಕ್ಷರಾಗಿದ್ದಾರೆ ಕೃಷ್ಣನ್ ನಾಯರ್. ಪತ್ನಿ ಶಕುಂತಲಾ ಅವರು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ, ಮಕ್ಕಳಾದ ಅಭಿಜ್ಞಾ ಕೃಷ್ಣ ಪಿಎಚ್ಡಿ ವಿದ್ಯಾರ್ಥಿನಿ, ನನ್ಮಾ ಕೃಷ್ಣ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪತ್ನಿ ಹಾಗೂ ಮಕ್ಕಳು ತಮ್ಮ ಬಿಡುವಿನ ಸಮಯದಲ್ಲಿ ಕೃಷಿ ಚಟುವಟಿಕೆಗಳಿಗೆ ಕೃಷ್ಣನ್ ನಾಯರ್ ಜೊತೆ ಕೈ ಜೋಡಿಸುತ್ತಾರೆ.