ಮಡಿಕೇರಿ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಮೇ 17ರ ಶನಿವಾರದಂದು ಕೊಡಗಿನ ಮಕ್ಕಂದೂರು ಗ್ರಾಮದಲ್ಲಿರುವ ಕುಂಭಗೌಡನ ಐನ್ ಮನೆಯಲ್ಲಿ ‘ಐನ್ ಮನೆ ಜಂಬರ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಅರೆಭಾಷಿಕರ ಐನ್ ಮನೆ ಐಸಿರಿ ಸರಣಿ ಕಾರ್ಯಕ್ರಮದ ಭಾಗವಾಗಿ ನಡೆಯುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದ್ದು, ಈ ಹಿಂದೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ
ಕುಡೇಕಲ್ಲಿನ ಐನ್ ಮನೆಯಲ್ಲಿ ಪ್ರಥಮ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದಲ್ಲಿ ಕುಂಬುಗೌಡರಿಗೆ ಲಿಂಗರಾಜರು ಕೊಡ ಮಾಡಿದ್ದ ನಿರೂಪದ ಅನಾವರಣ, ಅಕಾಡೆಮಿ ಪ್ರಕಟಿತ ಪುಸ್ತಕಗಳ ಬಿಡುಗಡೆ, ಅರೆಭಾಷೆ ಸುಪ್ರಭಾತದ ಧ್ವನಿ ಸುರುಳಿ ಬಿಡುಗಡೆ, ಕುಂಭಗೌಡನ ಕುಟುಂಬದ ಲಾಂಛನ ಬಿಡುಗಡೆ, ಕುಂಭಗೌಡನ ಕುಟುಂಬದ ಸಾಧಕರಿಗೆ ಸನ್ಮಾನ ಹಾಗೂ ಈ ಸಂಬಂಧ ಏರ್ಪಡಿಸಲಾಗಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮಗಳೂ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ವಹಿಸಲಿದ್ದಾರೆ. ಕುಂಭಗೌಡನ ಕುಟುಂಬದ ಪಟ್ಟಿದಾರ ಕೆ.ಕೆ. ಓಂಕಾರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸಾಧಕರನ್ನು ಸನ್ಮಾನಿಸಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ.
ಸಾಹಿತಿ ಎ.ಕೆ. ಹಿಮಕರ ‘ಅರೆಬಾಸೆ ಕುಟುಂಬಗಳ ಐನ್ ಮನೆ’ ಕುರಿತು ಹಾಗೂ ಕುಂಭಗೌಡನ ಅರವಿಂದ್ ಮಾಚಯ್ಯ ಇವರು ‘ಕುಂಭಗೌಡನ ಐನ್ ಮನೆ ನಡ್ದ್ ಬಂದ ದಾರಿ’ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಕ್ಕಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ.ಎನ್.ರಮೇಶ್, ಮಕ್ಕಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕರಾದ ಕೋಳುಮುಡಿಯನ ಅನಂತ ಕುಮಾರ್, ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷರಾದ ಲಕ್ಕಪ್ಪನ ಕೆ. ಹರೀಶ, ಶಿವಮೊಗ್ಗ ಜಿಲ್ಲೆ ಅಬಕಾರಿ ಇಲಾಖೆ ಉಪ ಆಯುಕ್ತರಾದ ಶ್ರೀಮತಿ ಸುಮಿತ ಕುಂಭಗೌಡನ ಕುಶಾಲಪ್ಪ ನಂಗಾರು, ಪ್ರಗತಿಪರ ಕೃಷಿಕರಾದ ಇಂದಿರಾ ದೇವಿಪ್ರಸಾದ್ ಸಂಪಾಜೆ ಇವರುಗಳು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮವು ಪೂರ್ವಾಹ್ನ 10.30ಕ್ಕೆ ಆರಂಭಗೊಳ್ಳಲಿದೆ.
ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ 9.30 ರಿಂದ ಜಯಪ್ರಕಾಶ್ ಪೆರುಮುಂಡ ಮತ್ತು ತಂಡದವರಿಂದ ಅರೆಭಾಷೆ ಹಾಡುಗಳ ಕಲರವ, ರೇಡಿಯೋ ಸಿಟಿ 91.1 ಎಫ್ಎಂ ಬೆಂಗಳೂರುನ ರೇಡಿಯೋ ಜಾಕಿ ಆರ್ಜೆ ತ್ರಿಶೂಲ್ ಕಂಬಳ ಇವರಿಂದ ಕಾರ್ಯಕ್ರಮ ಹಾಗೂ ಅಪರಾಹ್ನ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.