ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವಾ ನಿವೃತ್ತಿ ಹೊಂದಿದ ನೌಕರರಿಗೆ ಶುಕ್ರವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು. ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತರಾದ ಪುಷ್ಪಾವತಿ ನೂಚಿಲ ಮತ್ತು ಡಿ.ಸುಬ್ಬಕ್ಕ ದೇವರಗದ್ದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ವಹಿಸಿದ್ದರು.ದೇವಳದ ಕಾರ್ಯನಿರ್ವಹಣಾಧಿಕಾರಿ
ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೋಭಾ ಗಿರಿಧರ್, ವನಜಾ.ವಿ.ಭಟ್, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯ ಕುಮಾರ್ ಕೆ.ಸಿ ವೇದಿಕೆಯಲ್ಲಿದ್ದರು.
ಸುಮಾರು ೩೮ ವರ್ಷಗಳಿಂದ ಶ್ರೀ ದೇವಳದ ಸಿಬ್ಬಂಧಿಯಾಗಿ ಕೃಷಿ ತೋಟ, ಭೋಜನಶಾಲೆ, ಜಮಾ ಉಗ್ರಾಣ, ಹೊರಾಂಗಣ ಶುಚಿತ್ವ, ಆದಿಸುಬ್ರಹ್ಮಣ್ಯದಲ್ಲಿ ಸಹಾಯಕರಾಗಿ ದುಡಿದ ಪುಷ್ಪಾವತಿ ದೇವರಗದ್ದೆ ಹಾಗೂ ಕಳೆದ ೩೮ ವರ್ಷಗಳಿಂದ ಚಾಲ್ತಿ ಉಗ್ರಾಣ, ಹೊರಾಂಗಣ ಶುಚಿತ್ವ, ಚಂದ್ರಮೌಳೇಶ್ವರ ಗುಡಿ ಶುಚಿತ್ವ, ಜಮಾ ಉಗ್ರಾಣ ಸಹಾಯಕರಾಗಿ ಸೇವೆ ಸಲ್ಲಿಸಿದ ಡಿ.ಸುಬ್ಬಕ್ಕ ದೇವರಗದ್ದೆ ಅವರ ಸೇವಾಕಾಂಕ್ಷಿತ್ವವನ್ನು ಸಮಾರಂಭದಲ್ಲಿ ಆಡಳಿತ ಮಂಡಳಿ ಮತ್ತು ನೌಕರರ ವೃಂದ ಶ್ಲಾಘಿಸಿತು.
ದೇವಳದ ಸಿಬ್ಬಂಧಿ ಬಾಲಕೃಷ್ಣ ಆರ್ ಪ್ರಾರ್ಥನೆ ಹಾಡಿದರು.ಶ್ರೀ ದೇವಳದ ಅಭಿಯಂತರ ಉದಯ ಕುಮಾರ್ ಕೆ.ಸಿ ಸ್ವಾಗತಿಸಿದರು. ಪ್ರಮೀಳಾ ಅನಿಸಿಕೆ ವ್ಯಕ್ತಪಡಿಸಿದರು. ಯೋಗೀಶ್.ಎಂ.ವಿಟ್ಲ ವಂದಿಸಿದರು.ಮಹೇಶ್ ಕುಮಾರ್.ಎಸ್ ಅಗ್ರಹಾರ ಕಾರ್ಯಕ್ರಮ ನಿರೂಪಿಸಿದರು. ದೇವಳದ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.