ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಕುಕ್ಕೆಸುಬ್ರಹ್ಮಣ್ಯ ಸ್ವಾಮಿಗೆ ಮತ್ತು ಉಮಾಮಹೇಶ್ವರನಿಗೆ ಶಿವರಾತ್ರಿ ರಥೋತ್ಸವವು ನೆರವೇರಿತು. ಪ್ರಥಮವಾಗಿ ಒಂದೇ ಪಲ್ಲಕಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರು ರಥಬೀದಿಗೆ ಬಂದು

ರಥಾರೋಹಣರಾದರು. ಶ್ರೀ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಶ್ರೀ ದೇವರುಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ತಳಿರು ತೋರಣಗಳಿಂದ ಅಲಂಕೃತವಾದ ಚಿಕ್ಕರಥದಲ್ಲಿ ಶಿವರಾತ್ರಿ ಉತ್ಸವವು ನೆರವೇರಿತು.ಅವಳಿ ದೇವರುಗಳ ರಥಾರೋಹಣರಾದ ಬಳಿಕ ಭಕ್ತಾಧಿಗಳ ಪರಾಕಿನೊಂದಿಗೆ ಆನೆ, ಬಿರುದಾವಳಿ, ಬ್ಯಾಂಡ್, ನಾದಸ್ವರ, ತವಿಲ್ ನಿನಾದಗಳೊಂದಿಗೆ ಶಿವರಾತ್ರಿ ರಥೋತ್ಸವವು ನೆರವೇರಿತು. ಬಳಿಕ ವಾಸುಕಿ ಛತ್ರದ ಶಿವರಾತ್ರಿ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಿತು.

ಏಕಕಾಲದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಮತ್ತು ಉಮಾಮಹೇಶ್ವರನಿಗೆ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು, ವನಜಾ.ವಿ.ಭಟ್, ಶೋಭಾ ಗಿರಿಧರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.
ಕುಕ್ಕೆ ದೇವಳದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಶನಿವಾರ ರಾತ್ರಿ ಶಿವರಾತ್ರಿ ಪ್ರಯುಕ್ತ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಮತ್ತು ಉಮಾಮಹೇಶ್ವರನಿಗೆ ಜೊತೆಯಾಗಿ ಉತ್ಸವ ನೆರವೇರಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈಧಿಕ ವಿದಿವಿಧಾನ ನೆರವೇರಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗೃಹದ ಈಶಾನ್ಯಕ್ಕೆ ಇರುವ ಉಮಾಮಹೇಶ್ವರ ಸನ್ನಿಧಿಯಲ್ಲಿ ಮಹಾಶಿವರಾತ್ರಿಯಂದು ಹಗಲು ಏಕದಶರುದ್ರಾಭಿಷೇಕ ನೆರವೇರಿತು.