ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಥಮ ಅಂಗವಾಗಿ ಕಾರ್ತಿಕ ಬಹುಳ ಏಕಾದಶಿಯ ದಿನವಾದ ಶನಿವಾರ ಮೂಲ ಮೃತ್ತಿಕಾ ಪ್ರಸಾದ ವಿತರಣೆ ನಡೆಯಿತು. ಭಕ್ತರು ಪವಿತ್ರ ಪ್ರಸಾದ ಪಡೆದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಿಂದ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವರು
ಮೂಲಮೃತ್ತಿಕೆಯನ್ನು ಮದ್ಯಾಹ್ನ 11.15ರ ಸುಮುಹೂರ್ತದಲ್ಲಿ ವಿವಿಧ ವೈಧಿಕ ವಿಧಾನಗಳ ಮೂಲಕ ತೆಗೆದರು.ಆರಂಭದಲ್ಲಿ ಶ್ರೀ ದೇವಳದ ಪುರೋಹಿತರಿಗೆ ಮತ್ತು ಆಡಳಿತ ಮಂಡಳಿಗೆ ನೀಡಿದರು.ಬಳಿಕ ಭಕ್ತಾಧಿಗಳಿಗೆ ವಿತರಿಸಿದರು. ಶ್ರದ್ಧಾಭಕ್ತಿಯಿಂದ ಈ ಮಹಾಪ್ರಸಾದವನ್ನು ಭಕ್ತರು ಸ್ವೀಕರಿಸಿದರು.
ಸಹಸ್ರಾರು ಭಕ್ತರು ಬೆಳಗ್ಗೆ 10 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮೃತ್ತಿಕಾ ಪ್ರಸಾದ ಪಡೆದರು. ಹೆಚ್ಚಿನ ಸಂಖ್ಯೆಯಲ್ಲಿ ಊರ ಭಕ್ತಾಧಿಗಳು ಮೃತ್ತಿಕಾ ಪ್ರಸಾದ ಸ್ವೀಕರಿಸಿದರು. ಶ್ರೀದೇವಳದಲ್ಲಿ ಮೂಲಮೃತ್ತಿಕಾ ಪ್ರಸಾದ ತೆಗೆಯಲು ಇದ್ದುದರಿಂದ ಮಧ್ಯಾಹ್ನ 2 ಗಂಟೆಯ ನಂತರ ಭಕ್ತಾಧಿಗಳಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಮಾಡಲಾಯಿತು.ಏಕಾದಶಿ ದಿನವಾದುದರಿಂದ ಶ್ರೀ ದೇವರ ದರುಶನದ ಬಳಿಕ ಆಯ್ದ ಸೇವೆಗಳನ್ನು ಭಕ್ತರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ,ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿಜಿಎಸ್ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ವನಜಾ.ವಿ.ಭಟ್, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.









