ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸದ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಈ ಭಾರಿ ಕುಣಿತ ಭಜನೋತ್ಸವ ನೆರವೇರಲಿದೆ. ಉತ್ಸವ ಸಂದರ್ಭ ಕುಣಿತ ಭಜನೆಯು ವಿಶೇಷ ಮೆರುಗು ನೀಡಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು. ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು ನ.23 ರಂದುಲಕ್ಷದೀಪೋತ್ಸವದ ದಿನ ಸಂಜೆ 7ಗಂಟೆಯಿಂದ ಶ್ರೀ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ ಕಾಶಿಕಟ್ಟೆಯಾಗಿ ಕುಮಾರಧಾರದ ವರೆಗೆ ಕುಣಿತ ಭಜನಾ

ಸಂಭ್ರಮವನ್ನು ಶ್ರೀ ದೇವಳದ ಆಡಳಿತವುವಿಶೇಷವಾಗಿ ಹಮ್ಮಿಕೊಂಡಿದೆ ಎಂದರು. ಸುಮಾರು 1,000 ಭಜನಾ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.ಈ ಭಜನಾ ಸಂಭ್ರಮದಲ್ಲಿ ಪ್ರಮುಖವಾಗಿ ಖ್ಯಾತ ಗಾಯಕರಾದ ಜಗದೀಶ ಆಚಾರ್ಯ,ಪುತ್ತೂರು ಇವರು ಭಾಗವಹಿಸಲಿದ್ದು, ಭಜನಾ ತಂಡಗಳ ಪ್ರಧಾನ ವೇದಿಕೆಯನ್ನು ಅಲಂಕರಿಸಲಿದ್ದಾರೆ.ಅಲ್ಲದೆ ಇವರ ಹಾಡಿಗೆ ಪ್ರತಿ ತಂಡಗಳು ಹೆಜ್ಜೆ ಹಾಕಲಿದೆ.ವಿದ್ಯಾರ್ಥಿಗಳು, ಊರವರು, ಭಕ್ತರು, ಸಂಘ ಸಂಸ್ಥೆಗಳು, ಭಕ್ತರು ಭಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ರಥಬೀದಿ ಹಾಗೂ ಅಡ್ಡಬೀದಿ, ಕಾಶಿಕಟ್ಟೆವರೆಗಿನ ರಸ್ತೆಯ ಇಕ್ಕೆಲಗಳಲ್ಲಿ 10 ಮಂದಿ ಸದಸ್ಯರನ್ನೊಳಗೊಂಡ ಭಜನಾ ತಂಡಗಳು ಸೇವೆ ನೆರವೇರಿಸಲಿದೆ. ತಮಗೆ ನಿಗದಿ ಮಾಡಿ ಸ್ಥಳಗಳಲ್ಲಿ ತಂಡಗಳು ಸೇವೆ ನೆರವೇರಿಸಬೇಕಾಗಿದೆ ಎಂದು ಹೇಳಿದರು. ಸಂಘ ಸಂಸ್ಥೆಗಳು, ದೇವಾಲಯಗಳು, ವಿದ್ಯಾಸಂಸ್ಥೆ, ಭಕ್ತರು ಮತ್ತು ಊರವರು ಸೇವೆ ನೆರವೇರಿಸಬಹುದು. ಈ ಬಗ್ಗೆ ಈ ಬಗ್ಗೆ ಸಾರ್ವಜನಿಕರ ಸಭೆ ನಡೆಸಿ ಜವಬ್ದಾರಿ ಹಂಚಿಕೊಡಲಾಗುವುದು ಎಂದರು.ಈ ಭಜನಾ ಸಂಭ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶ ನೀಡಲಾಗಿದೆ. ಭಾಗವಹಿಸಲು ಇಚ್ಚಿಸುವ ತಂಡಗಳು ನ.20ದು ಅಪರಾಹ್ನ 2 ಗಂಟೆ ಒಳಗೆ ಶ್ರೀ ದೇವಳದ ಕಛೇರಿಯಲ್ಲಿ ಹೆಸರು ನೋಂದಾಯಿಸಬೇಕು.
ಭಜನೋತ್ಸವಕ್ಕೆ ಹೆಸರು ನೋಂದಾಯಿಸಲು ಕ್ಯೂ ಆರ್ ಕೋಡ್ ಮೂಲಕ ಅವಕಾಶ ಕಲ್ಪಿಸಲಾಗಿದೆ.ರಾಜ್ಯಾದ್ಯಂತ ದ ಭಕ್ತರು ಕುಣಿತ ಭಜನಾ ಸೇವೆ ನೆರವೇರಿಸಲು ಅವಕಾಶ ಒದಗಿಸಲು ಈ ಯೋಜನೆ ಮಾಡಲಾಗಿದೆ. ಭಾಗವಹಿಸುವ ಭಜನಾ ತಂಡದ ಸದಸ್ಯರು ಭಾರತೀಯ ಉಡುಗೆಗಳನ್ನು ಧರಿಸಬೇಕು. ಶ್ರೀ ದೇವರ ಉತ್ಸವಕ್ಕೆ ರಥಬೀದಿಗೆ ಪ್ರವೇಶಗೈಯುವ ವೇಳೆ ಶ್ರೀ ದೇವಳದ ಸಿಬ್ಬಂದಿಗಳು,ವಿದ್ಯಾಸಂಸ್ಥೆಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಮತ್ತು ಸಾರ್ವಜನಿಕ ಭಕ್ತರಿಂದ ಲಕ್ಷ ಹಣೆತೆಯನ್ನು ಬೆಳಗಿಸುವ ಕಾರ್ಯಕ್ರಮವು ನೆರವೇರಲಿದೆ. ರಥಬೀದಿ, ಸವಾರಿ ಮಂಟಪ, ಪ್ರಧಾನ ರಸ್ತೆಯ ಇಕ್ಕೆಲ, ಆಂಜನೇಯ ದೇವಸ್ಥಾನ, ಕಾಶಿಕಟ್ಟೆ, ಬಿಲದ್ವಾರ , ಕುಮಾರಧಾರ ಮತ್ತು ಆದಿಸುಬ್ರಹ್ಮಣ್ಯ ಸೇರಿದಂತೆ ಕ್ಷೇತ್ರಾದ್ಯಂತ ದೀಪ ಪ್ರಜ್ವಲನಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ವನಜಾ ವಿ ಭಟ್ ಉಪಸ್ಥಿತರಿದ್ದರು