ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಜಾತ್ರಾ ಮಹೋತ್ಸವದ ನಂತರ ರಕ್ಷಣಾ ದೈವಗಳಿಗೆ ಕೊಡುವ ಕಟ್ಟು ಕಟ್ಟಳೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿಯು ಶ್ರೀ ದೇವಳದಲ್ಲಿ ಆದಿತ್ಯವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ತನಕ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಜರುಗಿತು. ಸೋಮವಾರ ಬೆಳಗ್ಗೆ
ಕ್ಷೇತ್ರ ದೈವ ಪುರುಷರಾಯವು ಕುಮಾರಧಾರ ನದಿಗೆ ತೆರಳಿ ಮತ್ಸ್ಯ ತೀರ್ಥದಲ್ಲಿ ಪವಿತ್ರ ಮೀನುಗಳಿಗೆ ಅಕ್ಕಿ ಹಾಕುವುದರ ಮೂಲಕ ಆಹಾರವನ್ನು ನೀಡಿ ಹರಸಿತು.
ಆದಿತ್ಯವಾರ ರಾತ್ರಿ ಶ್ರೀ ದೈವಗಳ ಭಂಡಾರ ತೆಗೆಯಲಾಯಿತು. ಬಳಿಕ ಪುರೋಹಿತ ನಾರಾಯಣ ಭಟ್ ನೂಚಿಲ ಪ್ರಸಾದ ನೀಡಿದರು.ನಂತರ ದೈವಗಳಿಗೆ ಗಗ್ಗರ ಸೇವೆ ಆರಂಭವಾಯಿತು.ನಂತರ ಆರಂಭದಲ್ಲಿ ಗೋಪುರದ ಧರ್ಮಸಮ್ಮೇಳನ ಮಂಟಪದಲ್ಲಿ ಕಾಚುಕುಜುಂಬ, ತೇರಕುಮಾರ ದೈವಗಳ ನೇಮ ನಡಾವಳಿಗಳು ನಡೆಯಿತು. ತದನಂತರ ಕ್ಷೇತ್ರ ರಕ್ಷಕಿ ಹೊಸಳಿಗಮ್ಮ, ಉದ್ರಾಂಡಿ(ಉರಿಮಾರಿ) ಹಾಗೂ

ಪೊಟ್ಟಭೂತಗಳಿಗೆ ನೇಮೋತ್ಸವ ನೆರವೇರಿತು. ಮುಂಜಾನೆ ಪಂಜುರ್ಲಿ ಮತ್ತು ದೈವದ ಹಾಗೂ ಪುರುಷರಾಯ ದೈವದ ನೇಮೋತ್ಸವ ನಡೆಯಿತು. ಬಳಿಕ ಬೆಳಗ್ಗೆ ಪುರುಷರಾಯ ದೈವವು ಕುಮಾರಧಾರೆಗೆ ತೆರಳಿತು. ಕುಮಾರಧಾರ ನದಿಯಲ್ಲಿನ ಮತ್ಸ್ಯ ತೀರ್ಥದಲ್ಲಿರುವ ದೇವರ ಮೀನುಗಳಿಗೆ ಪುರುಷರಾಯ ದೈವವು ಆಹಾರ ನೀಡಿತು.ತದನಂತರ ಕುಮಾರಧಾರದಲ್ಲಿ ಭಕ್ತಾಧಿಗಳಿಗೆ ಪ್ರಸಾದ ನೀಡಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿಜಿಎಸ್ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ವನಜಾ.ವಿ.ಭಟ್ ಮತ್ತಿತರರು ಉಪಸ್ಥಿತರಿದ್ದರು.











