ಸುಬ್ರಹ್ಮಣ್ಯ :ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಸಂಭ್ರಮ.ಕುಕ್ಕೆ ಕ್ಷೇತ್ರವು ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ವಿದ್ಯುದ್ದೀಪಾಲಂಕಾರದಿಂದ ಶೋಭಿಸುತ್ತಿದೆ. ಎಲ್ಇಡಿ ದೀಪಗಳ ಜೋಡಣೆ ಮೂಲಕ ಕುಕ್ಕೆ ಗೋಪುರವು ವರ್ಣಮಯವಾಗಿ ಕಂಗೊಳಿಸುತ್ತಿದೆ. ಇದರೊಂದಿಗೆ
ಕಾಶಿಕಟ್ಟೆ, ಕುಮಾರಧಾರ ದ್ವಾರ, ಸವಾರಿ ಮಂಟಪ, ಬಿಲದ್ವಾರ, ಶ್ರೀ ದೇವಳದ ವಸತಿ ಗೃಹಗಳು, ಷಣ್ಮುಖ ಪ್ರಸಾದ ಬೋಜನ ಶಾಲೆ, ಯಾಗ ಶಾಲೆ, ಆದಿ ಸುಬ್ರಹ್ಮಣ್ಯ ಬೋಜನ ಶಾಲೆ ವಿದ್ಯುತ್ ದೀಪಾಲಂಕಾರದಿಂದ
ಕಂಗೊಳಿಸುತ್ತಿದೆ. ಕಾಶಿಕಟ್ಟೆಯ ವಿದ್ಯುದ್ದೀಪದ ಸ್ವಾಗತಗೋಪುರ ಅಲ್ಲಲ್ಲಿ ಅಳವಡಿಸಿದ್ದ ಪ್ರಭಾವಳಿಗಳು ಮತ್ತು ದೇವರ ಕಲಾಕೃತಿಗಳು ಜಾತ್ರೋತ್ಸವಕ್ಕೆ ವಿಶೇಷ ಮೆರುಗು ನೀಡಿದೆ. ರಸ್ತೆಯುದ್ದಕ್ಕೂ ಟ್ಯೂಬ್ ಲೈಟ್ಗಳು ಭಕ್ತರಿಗೆ ಬೆಳಕಿನ ವ್ಯವಸ್ಥೆ ನೀಡಿದೆ. ಮಂಗಳವಾರ ರಾತ್ರಿ ದೇವಳದಲ್ಲಿ ಭಕ್ತಿ ಸಂಭ್ರಮದ ಪಂಚಮಿ ರಥೋತ್ಸವ ನೆರವೇರಿತು.

ನಾಳೆ ಬೆಳಿಗ್ಗೆ 7.29ಕ್ಕೆ ಬ್ರಹ್ಮ ರಥೋತ್ಸವ:
ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಷಷ್ಠಿಯ ದಿನವಾದ ಬುಧವಾರ ಪ್ರಾತಃಕಾಲ 7.29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾಗಲಿದ್ದಾರೆ. ಅಲ್ಲದೆ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಲಿದ್ದಾರೆ.
ನಂತರ ಸುವರ್ಣ ವೃಷ್ಠಿಯಾಗಿ, ಚಿಕ್ಕ ರಥೋತ್ಸವ ನೆರವೇರಲಿದೆ.ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ಜರುಗಲಿದೆ. ಬಳಿಕ ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ಅವಳಿ ದೇವರಿಗೆ ಪೂಜೆ ನಡೆಯಲಿದೆ. ಬಳಿಕ ಮಹಾರಥೋತ್ಸವ ಸೇವೆ ನೆರವೇರಿಸಿದ ಭಕ್ತರಿಗೆ ಮಹಾಪ್ರಸಾದ ನೀಡಲಿದ್ದಾರೆ.

ಭಕ್ತ ಸಂದೋಹ:
ಕುಕ್ಕೆ ಕ್ಷೇತ್ರದಲ್ಲಿ ಸ್ಕಂಧ ಪಂಚಮಿಯ ದಿನವಾದ ಮಂಗಳವಾರ ಭಕ್ತ ಸಂದೋಹವೇ ನೆರೆದಿತ್ತು.ಕ್ಷೇತ್ರದ ತುಂಬೆಲ್ಲ ಭಕ್ತ ಸಾಗರವೇ ಕಂಡು ಬರುತ್ತಿತ್ತು.ರಥಬೀದಿ, ಒಳಾಂಗಣ, ಆದಿಸುಬ್ರಹ್ಮಣ್ಯ, ಪ್ರಧಾನ ವೃತ್ತದಿಂದ ಕಾಶಿಕಟ್ಟೆ ತನಕ ಭಕ್ತರ ದಂಡು ಕಂಡು ಬಂದಿತ್ತು.












