ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ತಿಕ ಬಹುಳ ದ್ವಾದಶಿಯಾದ ಆದಿತ್ಯವಾರ ಕೊಪ್ಪರಿಗೆ ಏರುವುದರ ಮೂಲಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭವಾಯಿತು. ಎಲ್ಲಾ ಕ್ಷೇತ್ರಗಳಲ್ಲಿ ಕೊಡಿ ಏರುವುದರ ಮೂಲಕ ಜಾತ್ರೆ ಆರಂಭವಾದರೆ, ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೋತ್ಸವ
ಪ್ರಾರಂಭಗೊಂಡಿದೆ. ಮುಂಜಾನೆ 7.47ರ ಧನುರ್ ಲಗ್ನ ಸುಮೂಹುರ್ತದಲ್ಲಿ ಅವಳಿ ಕೊಪ್ಪರಿಗೆಗಳನ್ನು ಏರಿಸಲಾಯಿತು. ಪೂರ್ವಶಿಷ್ಠ ಸಂಪ್ರದಾಯದಂತೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವಿವಿಧ ವೈಧಿಕ ವಿದಿ ವಿಧಾನಗಳನ್ನು ನೆರವೇರಿಸಿದರು.
ಅನ್ನದಾನದ ಸಂಕೇತ:
ಆರಂಭದಲ್ಲಿ ಪ್ರಧಾನ ಅರ್ಚಕರು ರಾಮ ಲಕ್ಷ್ಮಣ ಎಂಬ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.ನಂತರ ದೇವಳದ ಒಳಾಂಗಣದಲ್ಲಿರುವ ದೊಡ್ಡದಾದ ಎರಡು ಒಲೆಗಳ ಮೇಲೆ ಅನ್ನದಾನದ ಸಂಕೇತವಾದ ಕೊಪ್ಪರಿಗೆಗಳನ್ನು ಏರಿಸಲಾಯಿತು. ಕೊಪ್ಪರಿಗೆಗಳಲ್ಲಿ ಅನ್ನ ಬೆಂದ ಬಳಿಕ ಅದಕ್ಕೆ ಪೂಜೆ ಸಲ್ಲಿಸಲಾಯಿತು. ಕೊಪ್ಪರಿಗೆ ಏರುವುದರ ಮೂಲಕ ಕುಕ್ಕೆ ಕ್ಷೇತ್ರದಲ್ಲಿ ಭಕ್ತಿ ಸಡಗರದ ಜಾತ್ರೋತ್ಸವಕ್ಕೆ ಚಾಲನೆ ದೊರಕಿದೆ.ಶ್ರೀ ಕ್ಷೇತ್ರದಲ್ಲಿ ಆದಿತ್ಯವಾರ ಸಹಸ್ರಾರು ಭಕ್ತರು ಭಕ್ತಿಯಿಂದ ಕೊಪ್ಪರಿಗೆ ಅನ್ನ ಊಟ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿಜಿಎಸ್ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ವನಜಾ.ವಿ.ಭಟ್, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಪ್ರಸನ್ನ ಭಟ್, ಲೋಕೇಶ್ ಎ.ಆರ್ ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.









