ಸುಬ್ರಹ್ಮಣ್ಯ:ನಾಗಾರಾಧನೆಯ ಪುಣ್ಯ ತಾಣ ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಸಂಭ್ರಮ. ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ ವೈಭವದ ಬ್ರಹ್ಮ ರಥೋತ್ಸವ ನಡೆಯಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಮಂದಿ ಭಕ್ತರು ರಥೋತ್ಸವವವನ್ನು ಕಣ್ತುಂಬಿಕೊಂಡರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ

ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಬುಧವಾರ ಬೆಳಿಗ್ಗೆ 7.29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದ ಬಳಿಕ ಸುವರ್ಣ ವೃಷ್ಠಿಯಾಗಿ ಮೊದಲು ಪಂಚಮಿ ರಥೋತ್ಸವ ನೆರವೇರಿತು. ಬಳಿಕ ಭಕ್ತಿ ಸಂಭ್ರಮದಲ್ಲಿ ವೈಭವದ

ಚಂಪಾಷಷ್ಠಿ ಮಹಾರಥೋತ್ಸವ ಜರುಗಿತು.ಕೊಂಬು ಕಹಳೆ, ಚೆಂಡೆ,ಬಿರುದಾವಳಿಗಳು, ವಾದ್ಯ ಘೋಷಗಳು, ಸಾವಿರಾರು ಭಕ್ತರ ಕಂಠದಿಂದ ಹೊರಬಂದ ಜಯ ಘೋಷಗಳ ಮಧ್ಯೆ ವೈಭವೋಪೇತವಾಗಿ ರಥೋತ್ಸವ ನಡೆಯಿತು. ದೇವಳಧ ಆನೆ ಯಶಸ್ವಿ ರಥೋತ್ಸವಕ್ಕೆ ಸಾಥ್ ನೀಡಿತು.ಬಳಿಕ ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ಅವಳಿ ದೇವರಿಗೆ ಪೂಜೆ ನಡೆಯಿತು.ಕುಕ್ಕೆ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು ಕ್ಷೇತ್ರದ ತುಂಬೆಲ್ಲ ಭಕ್ತ ಸಾಗರವೇ ಕಂಡು ಬರುತ್ತಿತ್ತು.ಮಂಗಳವಾರ ರಾತ್ರಿ

ಪಂಚಮಿ ರಥೋತ್ಸವ ನಡೆಯಿತು. ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಬಿ.ರಮಾನಾಥ ರೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ,ಡಾ. ರಘು. ಬಿ, ಮಹೇಶ್ ಕುಮಾರ್, ಕರಿಕ್ಕಳ,ಅಜಿತ್ ಕುಮಾರ್, ಸೌಮ್ಯ ಭರತ್, ಲೀಲಾ ಮನಮೋಹನ್, ಪ್ರವೀಣ ಮರುವಂಜ, ಮಾಸ್ಟರ್ಪ್ಲಾನ್ ಮೇಲ್ವಿಚಾರಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಗಳು: ಪ್ರತಿರೂಪ ಸುಬ್ರಹ್ಮಣ್ಯ, ಶಾಂತಲಾ ಸುಬ್ರಹ್ಮಣ್ಯ
















