ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನ್ನದಾನ ನಿಧಿಗೆ ತೆಲಂಗಾಣ ಸರಕಾರದ ಕಂದಾಯ ಸಚಿವ ಪೊಂಗಲೇಟ್ ಶ್ರೀನಿವಾಸ ರೆಡ್ಡಿ ಅವರು ಹರಕೆ ರೂಪದಲ್ಲಿ ರೂ.1 ಕೋಟಿ ದೇಣಿಗೆಯನ್ನು ಶ್ರೀ ದೇವಳಕ್ಕೆ ಮಂಗಳವಾರ ನೀಡಿದ್ದಾರೆ. ಮಗಳ ಮದುವೆಗಾಗಿ ಇವರು ಮಾಡಿದ ಪ್ರಾರ್ಥನೆಯ ಫಲವಾಗಿ ಮೂರು ತಿಂಗಳ ಒಳಗೆ ಮದುವೆ ನಡೆದ ಕಾರಣ ತಾನು ಹೇಳಿಕೊಂಡ ಹರಕೆಯಂತೆ ಒಂದು
ಕೋಟಿ ಹಣವನ್ನು ಅನ್ನದಾನಕ್ಕೆ ನೀಡಿ ತನ್ನ ಹರಕೆ ಸೇವೆಯನ್ನು ಮಂಗಳವಾರ ಪೂರೈಸಿದರು. ಶ್ರೀನಿವಾಸ ರೆಡ್ಡಿ ಅವರು ಕಳೆದ ವರ್ಷ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಮುಂಭಾಗದಲ್ಲಿ ಮಗಳ ಮದುವೆಯು ಉತ್ತಮ ವರನೊಂದಿಗೆ ನೆರವೇರಬೇಕು ಎಂದು ಪ್ರಾರ್ಥಿಸಿದರು.ಅಲ್ಲದೆ ನನ್ನ ಪ್ರಾರ್ಥನೆ ಈಡೇರಿದರೆ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುವ ಪವಿತ್ರ ಅನ್ನದಾನಕ್ಕೆ ದೇಣಿಗೆಯನ್ನು ನೀಡುವುದಾಗಿ ಹರಕೆ ಹೊತ್ತಿದ್ದರು.ಇವರು ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದ 3 ತಿಂಗಳ ನಂತರ ಅಮೇರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಂದಿಗೆ ಇವರ ಮಗಳ ಮದುವೆ ನಡೆಯಿತು. ಈ ಮೂಲಕ 3 ತಿಂಗಳ ಒಳಗೆ ಪ್ರಾರ್ಥನೆಗೆ ದೇವರು ಫಲ ನೀಡಿದ ಕಾರಣ ಪ್ರಾರ್ಥಿಸಿ ವರ್ಷವಾಗುವ ಮೊದಲು ತಮ್ಮ ಹರಕೆ ತೀರಿಸಿದರು.ಅಲ್ಲದೆ ತನ್ನ ಮನಸಂಕಲ್ಪದಂತೆ ರೂ.1 ಕೋಟಿಯನ್ನು ಅನ್ನದಾನಕ್ಕೆ ನೀಡಿದರು.
ಅವಭೃತೋತ್ಸವದ ಪುಣ್ಯ ದಿನ ಶ್ರೀ ದೇವಳಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಶ್ರೀನಿವಾಸ ರೆಡ್ಡಿ ಅವರು ಶ್ರೀ ದೇವರ ದರುಶನ ಪಡೆದರು.ಇವರಿಗೆ ದೇವಳದ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.ನಂತರ ಶ್ರೀ ದೇವಳದಲ್ಲಿ ಬೋಜನ ಪ್ರಸಾದ ಸ್ವೀಕರಿಸಿದರು.
ನಂತರ ಆಡಳಿತ ಕಚೇರಿಗೆ ಆಗಮಿಸಿದ ಸಚಿವರು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ ಸುಳ್ಳಿ ಮತ್ತು ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ರೂ.೧ ಕೋಟಿ ಮೌಲ್ಯದ ಚೆಕ್ ಅನ್ನು ತನ್ನ ಮಗಳು ಮತ್ತು ಅಳಿಯನ ಮೂಲಕವೇ ಹಸ್ತಾಂತರಿಸಿದರು.ಈ ಸಂದರ್ಭ ಶ್ರೀನಿವಾಸ ರೆಡ್ಡಿ ಅವರ ಸಹೋದರ ಪ್ರಸಾದ್ ರೆಡ್ಡಿ ಹಾಗೂ ತಿರುಪತಿ ನ್ಯಾಷನಲ್ ಯುನಿವರ್ಸಿಟಿಯ ಪ್ರೋಫೆಸರ್ ಗಣಪತಿ ಭಟ್ ಇದ್ದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸಾ ಬೆಂಗಳೂರು, ಲೋಕೇಶ್ ಮುಂಡಕಜೆ, ಶೋಭಾ ಗಿರಿಧರ್, ವನಜಾ.ವಿ.ಭಟ್ ಉಪಸ್ಥಿತರಿದ್ದರು














