ಸುಳ್ಯ: ಸುಳ್ಯಕ್ಕೊಂದು ಕೈಗಾರಿಕಾ ವಲಯ ಸ್ಥಾಪನೆಯಾಗಬೇಕು. ಅಡಿಕೆ ಹಳದಿ ರೋಗದಿಂದ ಕಂಗೆಟ್ಟ ಅಡಿಕೆ ಕೃಷಿಕರಿಗೆ ಪರಿಹಾರ ನೀಡಬೇಕು, ರೋಗದ ಬಗ್ಗೆ ವಿಸ್ತೃತ ಸಂಶೋಧನೆ ಮಾಡಬೇಕು. ಸುಳ್ಯ ತಾಲೂಕಿನ ಎಲ್ಲಾ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾಡಬೇಕು. ವಿದ್ಯುತ್ ಸಮಸ್ಯೆ ಪರಿಹಾರಕ್ಕೆ 110 ಕೆವಿ ಸಬ್ ಸ್ಟೇಷನ್ ಶೀಘ್ರ ಅನುಷ್ಠಾನ ಮಾಡಲಾಗುವುದು. ಈ ಬಾರಿ ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಈ ಮೇಲೆ ಹೇಳಿದ ವಿಷಯಗಳನ್ನು ತ್ವರಿತವಾಗಿ ಅನುಷ್ಠಾನ ಮಾಡುತ್ತೇನೆ. ಸುಳ್ಯದ ಸಮಗ್ರ ಅಭಿವೃದ್ಧಿಗೆ
ಒಂದು ಮಾಸ್ಟರ್ ಪ್ಲಾನ್ ರೂಪಿಸುತ್ತೇನೆ. ಹೀಗೆ ಸುಳ್ಯದ ಅಭಿವೃದ್ಧಿಯ ಬಗ್ಗೆ ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸಿದ್ದಾರೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಅವರು ಸುಳ್ಯದ ಅಭಿವೃದ್ಧಿಯ ಬಗ್ಗೆಗಿನ ತಮ್ಮ ಮುಂದಿನ 5 ವರ್ಷದ ‘ವಿಷನ್’ನನ್ನು ಪ್ರಸ್ತುತ ಪಡಿಸಿದರು. ಸುಳ್ಯದ ಅಭಿವೃದ್ಧಿಯ ಜೊತೆಗೆ ಆಡಳಿತ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕಾಗಿದೆ. ತಾನು ಎಂದಿಗೂ
ಭ್ರಷ್ಟನಾಗುವುದಿಲ್ಲ. ಆಡಳಿತದಲ್ಲಿಯೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ನೀಡುತ್ತೇನೆ. ಸರಕಾರಿ ಕಚೇರಿಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳನ್ನು ಭರ್ತಿ ಮಾಡಲು ಮೊದಲ ಆದ್ಯತೆ. ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಿಯಾಗಿದ್ದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಈ ಭಾಗದ ಅಡಿಕೆ ಬೆಳೆಗಾರರು ಹಳದಿ ರೋಗ, ಎಲೆ ಚುಕ್ಕಿ ರೋಗದಿಂದ ಕಂಗೆಟ್ಟಿದ್ದಾರೆ. ಅದಕ್ಕೆ ಪರ್ಯಾಯ ಮತ್ತು ಪರಿಹಾರ ಆಗಬೇಕಾಗಿದೆ. ಅದಕ್ಕಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಈಗಾಗಲೇ 50 ಕೋಟಿ ನೀಡುವುದಾಗಿ ಘೋಷಿಸಲಾಗಿದೆ. ಅದನ್ನು 100 ಕೋಟಿಗೆ ಏರಿಸಲು ಪ್ರಯತ್ನ ಮಾಡುತ್ತೇನೆ.ಈ ಭಾಗದ ರಬ್ಬರ್ ಬೆಳೆಗೆ
ಬೆಲೆ ಮತ್ತು ಮಾರುಕಟ್ಟೆ ಸ್ಥಿರತೆ ನೀಡಲು ಪ್ರಯತ್ನ ನಡೆಸುತ್ತೇನೆ. ಕೈಗಾರಿಕಾ ವಲಯ ರೂಪಿಸುತ್ತೇನೆ ಆ ಮೂಲಕ ಅಭಿವೃದ್ಧಿಗೆ ವೇಗ ಮತ್ತು ಉದ್ಯೋಗ ಸೃಷ್ಠಿ ಸಾಧ್ಯವಾಗುತ್ತದೆ. ರಸ್ತೆ, ಆಸ್ಪತ್ರೆ, ಕುಡಿಯುವ ನೀರು, ಸಮರ್ಪಕ ವಿದ್ಯುತ್ ಪೂರೈಕೆ ಸೇರಿ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. 30 ವರ್ಷದಿಂದ ಒಂದೇ ಪಕ್ಷದ ಶಾಸಕರಿದ್ದು ಇಲ್ಲಿನ ಅಭಿವೃದ್ಧಿ ನಿಂತ ನೀರಿನಂತಾಗಿದೆ. ಅಭಿವೃದ್ಧಿಗೆ ವೇಗ ನೀಡಬೇಕಾಗಿದೆ. ಕ್ಷೇತ್ರದಲ್ಲಿ ಬದಲಾವಣೆಯ ಸಂಕೇತ ಕಂಡು ಬಂದಿದೆ ಎಂದು ಅವರು ಹೇಳಿದರು. ಟಿಕೆಟ್ ಹಂಚಿಕೆಯಲ್ಲಿ ಗೊಂದಲ, ನೋವು, ಅಸಮಾಧಾನ ಸಹಜ. ಎಲ್ಲವನ್ನೂ ಮಾತನಾಡಿ ಸರಿಪಡಿಸುತ್ತೇವೆ. ತನಗೆ ಹಿಂದೆಯೂ ಹಲವು ಬಾರಿ ಬಿಫಾರಂ ಕೈ ತಪ್ಪಿದ ಉದಾಹರಣೆಗಳಿವೆ. ರಾಜಕೀಯದಲ್ಲಿ ತಾಳ್ಮೆ ಮುಖ್ಯ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು. ಅಭಿವೃದ್ಧಿ ಆಗಿಲ್ಲಾ ಎಂದು ಚುನಾವಣಾ ಬಹಿಷ್ಕಾರ ಘೋಷಣೆ ಮಾಡಿದ ಎಲ್ಲರಲ್ಲಿಯೂ ಮಾತನಾಡಿ ಅವರಿಗೆ ಮನವರಿಕೆ ಮಾಡುತ್ತೇವೆ. ತಾನು ಗೆದ್ದರೆ ಅಂತಹಾ ಪ್ರದೇಶಗಳ ಮೂಲಭೂತ ಅಭಿವೃದ್ಧಿ ಮಾಡಲು ಸಿದ್ಧನಿದ್ದೇನೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗೆ ಜನರಿಂದ ಒಲವು-ಭವ್ಯ ನರಸಿಂಹಮೂರ್ತಿ:
ಕೆಪಿಸಿಸಿ ವಕ್ತಾರೆ ಹಾಗು ಮಾಧ್ಯಮ ಸಂವಹನ ವಿಭಾಗದ ಕಾರ್ಯದರ್ಶಿ ಭವ್ಯ ನರಸಿಂಹ ಮೂರ್ತಿ ಮಾತನಾಡಿ’ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ, ಮನೆಯೊಡತಿಗೆ ಮಾಸಿಕ 2000 ರೂ ನೀಡುವ ಗೃಹಲಕ್ಷ್ಮಿ, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ, ನಿರುದ್ಯೋಗಿ ಯುವಕರಿಗೆ ಮಾಸಾಸನ ನೀಡುವ ಯುವ ನಿಧಿ. ಹೀಗೆ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಕಾರ್ಡ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ, ಅಧಿಕಾರಕ್ಕೆ ಬಂದರೆ ಇದನ್ನು ಈಡೇರಿಸುವುದು ಗ್ಯಾರಂಟಿ ಎಂದು ಅವರು ಹೇಳಿದರು. ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀಡಿದ್ದ ಶೇ.99 ಭರವಸೆಯನ್ನು ಈಡೇರಿಸಿತ್ತು. ಬಿಜೆಪಿ ಸರಕಾರ ಜನರಿಗೆ ಕೊಟ್ಟ ಎಷ್ಟು ಭರವಸೆ ಈಡೇರಿಸಿದೆ ಎಂಬುದನ್ನು ಬಿಜೆಪಿಯವರು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ,ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಎನ್ಎಸ್ಯುಐ ಅಧ್ಯಕ್ಷ ಕೀರ್ತನ್ ಕೊಡಪಾಲ ಭಾಗವಹಿಸಿದ್ದರು.