ಸುಳ್ಯ:ಸುಳ್ಯಕ್ಕೆ ಅತೀ ಅಗತ್ಯವಾಗಿರುವ 110 ಕೆವಿ ಸಬ್ ಸ್ಟೇಷನ್ ಹಾಗೂ ಲೈನ್ ಕಾಮಗಾರಿ ಶೀಘ್ರ ಮುಗಿಸಿ ಮುಂದಿನ ಮಳೆಗಾಲಕ್ಕೆ ಮುನ್ನ 110 ಕೆವಿ ಲೈನ್ ಚಾಲೂ ಆಗುವಂತೆ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತಿದೆ ಎಂದು ವಿಧಾನಸಭಾ ಚುನಾವಣೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ಹೇಳಿದ್ದಾರೆ.ಸುಳ್ಯದಲ್ಲಿ ವಿವಿಧ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ವಿದ್ಯುತ್ ಲೈನ್ ಪೂರ್ತಿಗೆ
ಸರಕಾರಿ ಮಟ್ಟದಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತಿದೆ. ಲೈನ್ ಹಾದು ಹೋಗುವ ಮಾರ್ಗದಲ್ಲಿ ಟವರ್ ನಿರ್ಮಾಣದ ಸ್ಥಳದ ಸರ್ವೆ ನಡೆಸಿ, ನಕ್ಷೆ ತಯಾರಿಸಿ ಪರಿಹಾರ ನೀಡಿ ಟವರ್ ನಿರ್ಮಾಣ ಕಾಮಗಾರಿ ವೇಗ ನೀಡುವಂತೆ ಸೂಚಿಸಲಾಗಿದೆ. ಇಂಧನ ಸಚಿವರನ್ನು ಸುಳ್ಯಕ್ಕೆ ಕರೆಸಿ ಸಭೆ ನಡೆಸಿ ಕಾಮಗಾರಿಗೆ ವೇಗ ನೀಡುವ ಪ್ರಯತ್ನ ನಡೆಸಲಾಗುವುದು.
ಸುಳ್ಯದ ವಿವಿಧ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಜನರಿಗೆ ಶೀಘ್ರ ಸೇವೆ ಲಭಿಸುವಂತೆ ಆಗ್ರಹಿಸಲಾಗಿದೆ.ಸರಕಾರಿ ಕಚೇರಿಗಳ ಕುಂದು ಕೊರತೆಗಳ ಬಗ್ಗೆ, ಸಿಬ್ಬಂದಿ ನೇಮಕದ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು. 94ಸಿ, ಅಕ್ರಮ ಸಕ್ರಮ ಕಡತ ವಿಲೇವಾರಿ ಶೀಘ್ರ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೇಮಕ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು ಈ ಕುರಿತು ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ. ಸದ್ಯದಲ್ಲಿಯೇ ಹೊಸ ಬ್ಲಾಕ್ ಅಧ್ಯಕ್ಷರ ನೇಮಕಾತಿ ನಡೆಯಲಿದೆ ಎಂದರು. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ ಎಂದು ಅವರು ಹೇಳಿದರು.
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ಜಿಲ್ಲಾ ಕೆಡಿಪಿ ಸದಸ್ಯೆ ಸುಜಯ ಕೃಷ್ಣ, ಅನುಸೂಯ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಪಿ.ಎ.ಮಹಮ್ಮದ್, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನ.ಪಂ.ಸದಸ್ಯ ರಾಜು ಪಂಡಿತ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ,
ಹೆಚ್. ಆದಂ ಕಡಬ, ಶ್ರೀಹರಿ ಕುಕ್ಕುಡೇಲು, ರಾಧಾಕೃಷ್ಣ ಪರಿವಾರಕಾನ, ಎಸ್.ಕೆ.ಹನೀಫ್, ಜಮಾಲುದ್ದೀನ್ ಪಂಜ, ಜಂಶೀರ್ ಶಾಲೆಕ್ಕಾರ್, ಆಶಿಕ್ ಅರಂತೋಡು, ಚಂದ್ರಶೇಖರ ಕೋಲ್ಚಾರ್ ಮತ್ತಿತರರು ಉಪಸ್ಥಿತರಿದ್ದರು.












