ಸುಳ್ಯ:ಕರಾವಳಿ ಭಾಗದ ಜನರು ಅಡಕೆ, ರಬ್ಬರ್ ಕೃಷಿ ಮಾತ್ರವಲ್ಲದೆ ಜೇನು ಸೇರಿದಂತೆ ಉಪ ಕೃಷಿಗಳಿಗೂ ಆದ್ಯತೆ ನೀಡಬೇಕು. ಈ ಮೂಲಕ ಕೃಷಿಕರ ಆರ್ಥಿಕ ಪರಿಸ್ಥಿತಿ ಹೆಚ್ಚಾಗುವ ಮೂಲಕ ಜೀವನ ಮಟ್ಟ ಆರ್ಥಿಕವಾಗಿ ಸದೃಡವಾಗಬೇಕು ಎಂದು ದೆಹಲಿಯ ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲಗಳ ಬ್ಯೂರೋ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಜಿ.ಪಿ. ಸಿಂಗ್ ಹೇಳಿದರು.ಭಾರತ ಸರಕಾರದ
ಪರಿಶಿಷ್ಟ ಜಾತಿ ಉಪಯೋಜನೆಯಡಿ ಸುಳ್ಯ ತಾಲೂಕಿನ ಸಂಪಾಜೆ, ಆಲೆಟ್ಟಿ, ಐವರ್ನಾಡು ಗ್ರಾಮಗಳ 265 ಅರ್ಹ ಪ.ಜಾತಿ ಪಲಾನುಭವಿಗಳಿಗೆ ಸುಳ್ಯ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ 11ಬಗೆಯ ಕೃಷಿ ಸವಲತ್ತುಗಳ ವಿತರಣೆ ಮಾಡಿ ಮಾತನಾಡಿದರು.
ಸುಳ್ಯ ಭಾಗದ ಕೃಷಿಕರು ಶ್ರಮ ಜೀವಿಗಳು. ಈ ನಿಟ್ಟಿನಲ್ಲಿ ಯೋಜನೆಯ ಸವಲತ್ತುಗಳು ಸುಳ್ಯ ತಾಲೂಕಿನ ಪಂಚಾಯಿತಿಗಳಿಗೆ ಹಂಚಿಕೆ ಮಾಡಲಾಗಿದೆ. ಪಶ್ಚಿಮ ಘಟ್ಟದ ಉತ್ತಮ ವಾತಾವರಣ, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಎಲ್ಲಿಯೂ ಕಾಣ ಸಿಗುವುದಿಲ್ಲ. ಇದನ್ನು ಇನ್ನಷ್ಟು ಉತ್ತಮ ಗೊಳಿಸಬೇಕು. ಜನರು ಕೃಷಿಯಡೆಗೆ ಆಕರ್ಷಿತರಾಗಬೇಕು ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಗಳಿಸಬೇಕು ಎನ್ನುವ ನಿಟ್ಟಿನಲ್ಲಿ ಸೌಲಭ್ಯ ನೀಡಲಾಗಿದೆ. ಸಲಕರಣೆ ಮಾತ್ರ ಅಲ್ಲ, ನಮ್ಮ ಕಡೆಯಿಂದ ತರಬೇತಿಯೂ ನೀಡಲಾಗುತ್ತದೆ ಎಂದು ಹೇಳಿದರು.

ದೆಹಲಿಯ ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲಗಳ ಬ್ಯೂರೋ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಕೆ.ಪ್ರದೀಪ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಬಡ ಜನರು ಕೂಡ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಮಾನ ಎನ್ನುವ ಅಡಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಭಾರತ ಸರಕಾರ ಜೋಡಿಸಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಸರಕಾರದ ಸವಲತ್ತುಗಳಿಂದ ವಂಚಿತ ಆಗಬಾರದು ಎಂದು ಕೃಷಿ ಸಖಿ ಹಾಗೂ ಸಂಜೀವಿನಿಯವರ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಙಾನಿ ಡಾ. ಟಿ.ಜೆ.ರಮೇಶ್, ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲಗಳ ಬ್ಯೂರೋ ಪ್ರಾದೇಶಿಕ ಕೇಂದ್ರ ವಿಜ್ಞಾನಿ ಡಾ.ಸುನಿಲ್ ಅರ್ಚಕ್, ತ್ರಿಶೂರ್ ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲಗಳ ಬ್ಯೂರೋ ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ. ಎಂ.ಲತಾ, ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ.ಕವಿತಾ ಗುಪ್ತಾ, ಯೋಜನೆಯ ಕಾರ್ಡಿನೇಟರ್ ಡಾ.ಎಸ್.ಕೆ. ಕೌಶಿಕ್, ಸುಳ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹಮೀದ್ ಜಿ.ಕೆ. ಉಪಸ್ಥಿತರಿದ್ದರು.
265 ಮಂದಿಗೆ ಸಲಕರಣೆ ವಿತರಣೆ :
ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲಗಳ ಬ್ಯೂರೋ ಪ್ರಾದೇಶಿಕ ಕೇಂದ್ರ ತ್ರಿಶೂರ್ ಹಾಗೂ ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ ಇವರ ಮೂಲಕ ಸುಳ್ಯ ತಾಲೂಕಿನ ಸಂಪಾಜೆ, ಆಲೆಟ್ಟಿ ಮತ್ತು ಐವರ್ನಾಡು ಗ್ರಾಮ ಪಂಚಾಯಿತಿಯ 265 ಮಂದಿ ಅರ್ಹ ಪ.ಜಾತಿ ಜನರಿಗೆ ಸವಲತ್ತುಗಳ ವಿತರಣೆ ನಡೆಯಿತು. ಈ ಮೂರು ಗ್ರಾಮಗಳ ಕೃಷಿಕರನ್ನು ಕೃಷಿ ಸಖಿ ಹಾಗೂ ಸಂಜೀವಿನಿಯವರ ಮೂಲಕ ಆಯ್ಕೆ ಮಾಡಿ ಫಲಾನುವಿಗಳಿಗೆ ಈ ಸಲಕರಣೆಗಳನ್ನು ಯೋಜನೆಯ ಮೂಲಕ ವಿತರಣೆ ಮಾಡಲಾಯಿತು. ಒಟ್ಟು 265 ಮಂದಿ ಕೃಷಿಕರಿಗೆ ಎರಡು ಜೇನು ಪೆಟ್ಟಿಗೆ, ಮರ ಹತ್ತುವ ಯಂತ್ರ, ತೆಂಗಿನಕಾಯಿ ಸುಲಿಯುವ ಯಂತ್ರ, ತಳ್ಳು ಗಾಡಿ, ಟೈಲರಿಂಗ್ ಮೆಷಿನ್, ಮದ್ದು ಸಿಂಪಡಿಸುವ ಸ್ಪ್ರೇಯರ್, ಹಾರೆ, ಕತ್ತಿ, ಪಿಕ್ಕಾಸು, ಸಬ್ಬಲು ಮತ್ತು ಅಲ್ಯೂಮಿನಿಯಂ ಏಣಿಗಳನ್ನು ವಿತರಣೆ ಮಾಡಲಾಯಿತು.
ರಾಷ್ಟ್ರೀಯ ಸಸ್ಯ ತಳಿ ಪ್ರಾದೇಶಿಕ ಕೇಂದ್ರ ವಿಜ್ಞಾನಿ ಡಾ.ಸುನಿಲ್ ಅರ್ಚಕ್ ಸ್ವಾಗತಿಸಿದರು. ತ್ರಿಶೂರ್ ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲ ಪ್ರಾದೇಶಿಕ ಕೇಂದ್ರ ವಿಜ್ಞಾನಿ ಡಾ. ಎಂ.ಲತಾ ವಂದಿಸಿದರು. ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯತ್ ಎಮ್.ಆರ್.ಎಲ್.ಎಂ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ ಸಹಕರಿಸಿದರು.












