ಸುಳ್ಯ: ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು, ಆರ್ಥಿಕ ಸಂಕಷ್ಟದ ಮಧ್ಯೆಯೂ ಶಿಕ್ಷಣ ಪಡೆದ ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಕೃತಿ ಎಸ್.ವಿಶ್ವ ವಿದ್ಯಾಲಯಮಟ್ಟದಲ್ಲಿ ಎಂಟು ಚಿನ್ನದ ಪದಕ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ತಂದೆ ತಾಯಿಗಳ ಶ್ರಮದ ಬೆವರನ್ನು ಚಿನ್ನವಾಗಿ ಪರಿವರ್ತಿಸಿರುವುದು ಈ ಗ್ರಾಮೀಣ ಪ್ರತಿಭೆಯ ಸಾಧನೆ.
ಬದುಕಿನಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಛಲವೊಂದಿದ್ದರೆ ಸಾಧನೆಯ ಪಥ ನಮ್ಮದಾಗುವುದು. ಈ ಮಾತನ್ನು ಅಕ್ಷರಶಃ ಸತ್ಯ ಎಂಬಂತೆ ಸಾಬೀತುಪಡಿಸಿದವರು ಮೆಕ್ಯಾನಿಕಲ್

ಇಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆಗೈದು ರಾಜ್ಯಪಾಲರಿಂದ ಎಂಟು ಚಿನ್ನದ ಪದಕ ಪಡೆದ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಎಸ್. ಕೃತಿ. ಸುಳ್ಯ ಹಳೆಗೇಟಿನ ಜನಾರ್ಧನ ಎನ್. ಮತ್ತು ಶಾರದಾ ದಂಪತಿಯ ಪುತ್ರಿಯಾದ ಕೃತಿ ಹುಟ್ಟು ಪ್ರತಿಭಾವಂತೆ.
ಸುಳ್ಯ ಎಂಬ ಪುಟ್ಟ ಪಟ್ಟಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅವಕಾಶಗಳ ಬಾಗಿಲು ತೆರೆದ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ಪ್ರೋತ್ಸಾಹ ಮತ್ತು ಸತತ ಪರಿಶ್ರಮದಿಂದ ಕೃತಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ಕೃತಿಯ ಸಾಧನೆಯಿಂದ ಸುಳ್ಯವೇ ಹೆಮ್ಮೆ ಪಡುವಂತಾಗಿದೆ. ಇವರ ಸಾಧನೆಗೆ ಇಡೀ ರಾಜ್ಯವೇ ತಲೆದೂಗಿದೆ.ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ,ಬಡತನದ ಬೇಗೆಯಲ್ಲಿದ್ದರೂ ಆಟೋ ಚಾಲಕರಾದ ಜನಾರ್ಧನ ಹಾಗು ಕ್ಯಾಶ್ಯೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ಶಾರದಾ ಮಕ್ಕಳ ಶಿಕ್ಷಣಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಿದರು. ತಂದೆ-ತಾಯಿಯ ಶ್ರಮದ ಬೆವರನ್ನು ಕೃತಿಯು ತನ್ನ ಅದ್ಭುತ ಪರಿಶ್ರಮದಿಂದ ಚಿನ್ನದ ಪದಕಗಳಾಗಿ ಪರಿವರ್ತಿಸಿದರು. ಆ ಮೂಲಕ ತಂದೆ ತಾಯಿಯ ಶ್ರಮಕ್ಕೆ ಪುತ್ರಿಯು ಎಂಟು ಚಿನ್ನದ ಪದಕಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಕೃತಿಯ ತಂದೆ ಜನಾರ್ಧನ .ಏನ್ ಸುಮಾರು 10 ವರ್ಷಗಳಿಂದ ರಿಕ್ಷಾ ಚಲಾಯಿಸುತ್ತಿದ್ದಾರೆ. ತಾಯಿ ಹಲವು ವರ್ಷಗಳಿಂದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಇವರ ಈ ವರಮಾನದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರು. ಕುಟುಂಬವು ಪ್ರಸ್ತುತ ಸುಳ್ಳದ ಹಳೆಗೇಟಿನಲ್ಲಿ ನೆಲೆಸಿದ್ದಾರೆ. ಬಡತನದ ಬೇಗೆಯನ್ನು ಕಂಡಂತಹ ಕುಟುಂಬವಾದರೂ ಶಿಕ್ಷಣ ವಿಷಯದಲ್ಲಿ ಬಹಳಷ್ಟು ಸಿರಿವಂತರು ಎಂಬುದನ್ನು ಸಾಬೀತುಪಡಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದ 22ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಕೃತಿ ಚಿನ್ನದ ಪದಕಗಳನ್ನು ಸ್ವೀಕರಿಸಿರುವುದನ್ನು ಕಣ್ತುಂಬಿಕೊಂಡಾಗ ಈ ತಂದೆ-ತಾಯಿ ಭಾವುಕರಾದರು.

ನಿಮ್ಮ ಸಾಧನೆಗೆ ಪ್ರೇರಣೆ ಏನು ಎಂಬ ಪ್ರಶ್ನೆಗೆ ಕೃತಿಯಲ್ಲಿ ಕೇಳಿದರೆ ಈ ರೀತಿ ಉತ್ತರಿಸುತ್ತಾರೆ “ನನ್ನ ಪೋಷಕರೇ ನನಗೆ ಸ್ಪೂರ್ತಿ, ನನ್ನ ತಾಯಿ, ಬಿಎ ಪದವಿ ಹೊಂದಿದ್ದರಿಂದ ಅವರಿಗೆ ಶಿಕ್ಷಣದ ಮಹತ್ವ ಗೊತ್ತಿತ್ತು. ನಾವು ಎರಡು ಹೆಣ್ಣು ಮಕ್ಕಳೇ ಆದ್ದರಿಂದ ಕುಟುಂಬದವರೆಲ್ಲರೂ ಹೆಣ್ಣುಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡುವ ಅಗತ್ಯವಿಲ್ಲ ,ಎಷ್ಟೇ ಆದರೂ ಮದುವೆಯಾಗಿ ಬೇರೆ ಮನೆ ಸೇರುವವರು ಎಂಬ ಅಭಿಪ್ರಾಯವನ್ನು ತಂದೆಯ ಮುಂದೆ ಇಡುತ್ತಿದ್ದರು. ಆದರೆ ನನ್ನ ತಂದೆ ಬೇರೆಯವರ ಮಾತಿಗೆ ಕಿವಿಗೊಡದೆ ಮಕ್ಕಳ ಶಿಕ್ಷಣವೇ ನನ್ನ ಗುರಿ ಎಂಬ ಛಲತೊಟ್ಟು ನಮಗೆ ಶಿಕ್ಷಣ ಕೊಡಿಸಿದರು .ತಂದೆ ತಾಯಿಯ ಪ್ರೋತ್ಸಾಹ ಮತ್ತು ನನ್ನ ಕಾಲೇಜು ಹಾಗೂ ಸ್ನೇಹಿತರ ಪ್ರೋತ್ಸಾಹದಿಂದ ನಾನು ಇಂದು ಇಂತಹ ಸ್ಥಾನದಲ್ಲಿದ್ದೇನೆ” ಎಂದರು. ಇನ್ನು ನನ್ನ ಕಾಲೇಜು ಹಾಗೂ ವಿಭಾಗಕ್ಕೆ ಎಂದೆಂದಿಗೂ ಋಣಿಯಾಗಿರುವ ಎಂದು ಹೇಳಿದ ಕೃತಿ ಮೆಕ್ಯಾನಿಕಲ್ ವಿಭಾಗವನ್ನು ಕುರಿತು ಹೇಳಿದ್ದು ಹೀಗೆ “ಬಹುಶಃ ನಾನು ಮೆಕ್ಯಾನಿಕಲ್ ವಿಭಾಗ ಆರಿಸಿಕೊಂಡದ್ದಕ್ಕೆ ನನಗೆ ರ್ಯಾಂಕ್ ಬಂದಿದೆ. ಏಕೆಂದರೆ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಕ್ಕಿರುವುದರಿಂದ ನನಗೆ ರ್ಯಾಂಕ್ ಪಡೆಯಲು ಸಾಧ್ಯವಾಯಿತು. ನಮ್ಮ ಡಿಪಾರ್ಟ್ಮೆಂಟ್ನಲ್ಲಿ ಮೋಟಿವೇಷನಲ್ ಪ್ರೋಗ್ರಾಮ್ ಗಳನ್ನು ಹೆಚ್ಚಾಗಿ ಆಯೋಜಿಸುತ್ತಿದ್ದರು.

ಅದರೊಂದಿಗೆ ಅತ್ಯುತ್ತಮವಾದ ಉಪನ್ಯಾಸಕ ವೃಂದ ಮತ್ತು ನನ್ನ ನೆಚ್ಚಿನ ಸ್ನೇಹಿತರ ಬಳಗ, ಮುಖ್ಯವಾಗಿ ನಮ್ಮ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್ ರವರ ಬೆಂಬಲವನ್ನು ನೆನಪಿಸಿಕೊಳ್ಳಲೇಬೇಕು. ಈ ಎಲ್ಲಾ ಪ್ರೋತ್ಸಾಹಗಳು ನನ್ನನ್ನು ಸಾಧನಾ ಶಿಖರಕ್ಕೆ ಏರುವಂತೆ ಮಾಡಿದೆ” ಎಂದು ನುಡಿದರು. ವಿಶ್ವವಿದ್ಯಾನಿಲಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಕೃತಿ ಎಂದಿಗೂ ರ್ಯಾಂಕ್ ಗಾಗಿ ಓದಿರಲಿಲ್ಲ, ನಿರಂತರ ಓದುವ ಹವ್ಯಾಸವನ್ನು ತೊಡಗಿಸಿಕೊಂಡಿದ್ದರು. ಇದೀಗ ಕಾನ್ಸೆಪ್ಶಿಯಾ ಎಂಬ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ಕೃತಿಗೆ ಡಿಸೈನ್ ವಿಭಾಗದಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಆಸೆ ಇದೆ.”ರ್ಯಾಂಕ್ ಪಡೆದಿರುವುದು ಕೆ ವಿ ಜಿ ಎಂಜಿನಿಯರಿಂಗ್ ಕಾಲೇಜಿಗೆ, ನನ್ನ ತಂದೆ ತಾಯಿಗೆ ಎಲ್ಲರಿಗೂ ಬಹಳಷ್ಟು ಖುಷಿ ತಂದಿದೆ ,ಅವರೆಲ್ಲರ ಸಂತೋಷ ನನ್ನಲ್ಲಿ ಸಾರ್ಥಕತೆಯ ನಗೆ ಬೀರುವಂತೆ ಮಾಡಿದೆ ಎನ್ನುವುದು ಕೃತಿಯವರ ಅಭಿಪ್ರಾಯ. ಕೃತಿಯ ಈ ಸಾಧನೆಗೆ ಡಾ ರೇಣುಕಾಪ್ರಸಾದ್ ಕೆ ವಿ ,ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು ಜೆ ಪ್ರಾಂಶುಪಾಲರಾದ ಡಾ ಸುರೇಶ ವಿ , ಎಲ್ಲಾ ವಿಭಾಗ ಮುಖ್ಯಸ್ಥರುಗಳು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
