ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಗಡುವನ್ನು ಇದೇ 21ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಮಂಗಳವಾರ (ನ. 15) ಕೊನೆ ದಿನವಾಗಿತ್ತು.
ಈ ಅವಧಿ ವಿಸ್ತರಣೆ ಮಾಡುವಂತೆ ರಾಜ್ಯದ ಮೂಲೆ, ಮೂಲೆಗಳಿಂದ ಪಕ್ಷದವರು ಹಾಗೂ ಅನ್ಯ ಪಕ್ಷಗಳಿಂದ ಕಾಂಗ್ರೆಸ್‌ಗೆ ಬರಲು ಇಚ್ಚಿಸಿರುವ
ಟಿಕೆಟ್ ಆಕಾಂಕ್ಷಿಗಳಿಂದ ವಿಪರೀತ ಒತ್ತಡವಿದೆ. ಹೀಗಾಗಿ ಈ ಬದಲಾವಣೆ ಮಾಡಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನ. 5ರಿಂದ ಅರ್ಜಿ ಸ್ವೀಕಾರ ಆರಂಭಿಸಲಾಗಿತ್ತು. 10 ದಿನಗಳಲ್ಲಿ 1,100ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿಗಳನ್ನು ಪಡೆದುಕೊಂಡಿದ್ದು, 650ಕ್ಕೂ ಹೆಚ್ಚು ಮಂದಿ ಡಿಡಿ ಸಹಿತ ಅರ್ಜಿ ಸಲ್ಲಿಸಿದ್ದಾರೆ.
ಕಾಂಗ್ರೆಸ್‌ನಿಂದ ‘ಬಿ’ ಫಾರಂ ಪಡೆಯಲು ಅರ್ಜಿ ಸಲ್ಲಿಕೆ ಕಡ್ಡಾಯ. ಎಲ್ಲರೂ ಅರ್ಜಿ ಸಲ್ಲಿಸಬೇಕು’ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದರು. ಸುಳ್ಯದ ಪ್ರಮುಖ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ. ಪುತ್ತೂರು ಕ್ಷೇತ್ರದ ಟಿಕೆಟ್ ಬಯಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಸುಳ್ಯ ಕ್ಷೇತ್ರದಿಂದ ಟಿಕೆಟ್ ಬಯಸಿ ಕೆಪಿಸಿಸಿ ಸದಸ್ಯ ಹಾಗು ಕಡಬ ಬ್ಲಾಕ್ ಉಸ್ತುವಾರಿ ಹೆಚ್.ಎಂ.ನಂದಕುಮಾರ್, ಸುಳ್ಯ ಬ್ಲಾಕ್ ಉಸ್ತುವಾರಿ ಜಿ.ಕೃಷ್ಣಪ್ಪ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.